ತುಮಕೂರು: ರಾಜ್ಯ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಬೆಂಗಳೂರಿನಲ್ಲಿ ಗುರುವಾರ ಮುಕ್ತಾಯವಾಗಿದ್ದು, ಜಿಲ್ಲೆಯ 11 ಕ್ಷೇತ್ರಗಳಲ್ಲಿಯೂ ಸಾಮಾಜಿಕ ನ್ಯಾಯದ ಅಡಿಯಲ್ಲಿ ಅರ್ಹರ ಹೆಸರನ್ನು ಹೈಕಮಾಂಡ್‌ಗೆ ರವಾನಿಸಲಾಗಿದೆ.
ಟಿಕೆಟ್‌ಗೆ ಹೆಚ್ಚು ಅರ್ಜಿ ಸಲ್ಲಿಕೆಯಾಗಿರುವ ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯದ ಆಧಾರದಲ್ಲಿ ಗರಿಷ್ಠ ಮೂವರ ಹೆಸರನ್ನು ಹೈಕಮಾಂಡ್‌ಗೆ ರವಾನಿಸಲಾಗಿದ್ದು, ದೆಹಲಿಯಲ್ಲಿ ನಡೆಯುವ ಮಹತ್ವದ ಸಭೆಯಲ್ಲಿ ಅಭ್ಯರ್ಥಿ ಹೆಸರು ಫೈನಲ್ ಆಗಲಿದೆ.
ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ, ಜಿಲ್ಲೆಯ ಪಾಲಿಗೆ ಹೈಕಮಾಂಡ್ ಎನಿಸಿರುವ ಡಾ.ಜಿ.ಪರಮೇಶ್ವರ ಸಭೆಯಲ್ಲಿ ಭಾಗವಹಿಸಿದ್ದರಾದರೂ ಯಾರೊಬ್ಬರ ಪರವಾಗಿಯೂ ಮಾತನಾಡದೆ ಮೌನವಾಗಿದ್ದರು ಎನ್ನಲಾಗಿದ್ದು, ಇದೇ ಪ್ರಸ್ತುತ ಕಾಂಗ್ರೆಸ್ ಪಾಳಯದ ಬಹು ಚರ್ಚಿತ ವಿಷಯವಾಗಿದೆ.
ಏಕನಾಯಕತ್ವಕ್ಕೆ ಹೈಕಮಾಂಡ್ ಗ್ರೀನ್‌ಸಿಗ್ನಲ್?: ರಾಮನಗರದಲ್ಲಿ ಡಿ.ಕೆ.ಶಿವಕುಮಾರ್, ಮೈಸೂರಿನಲ್ಲಿ ಸಿದ್ದರಾಮಯ್ಯ ಅವರಿಗೆ ನೀಡಿದಂತೆ ತುಮಕೂರು ಜಿಲ್ಲೆಯಲ್ಲಿಯೂ ಡಾ.ಜಿ.ಪರಮೇಶ್ವರ ಅವರಿಗೆ ಏಕನಾಯಕತ್ವ ನೀಡಲು ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ.11 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಯ ಹೊಣೆಯನ್ನು ಪರಮೇಶ್ವರ ಅವರಿಗೆ ವಹಿಸಲಾಗಿದ್ದು, ಅವರು ಸೂಚಿಸಿದವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಇದಕ್ಕಾಗಿಯೇ ಅನುಭವಿ ರಾಜಕಾರಣಿ ಪರಮೇಶ್ವರ ಇತ್ತೀಚೆಗೆ ಪಕ್ಷದ ಮಟ್ಟದಲ್ಲಿ ಬಳಸಿದ ರಾಜಕೀಯ ಪಟ್ಟುಗಳಿಗೂ ಫಲಸಿಕ್ಕಿದೆ. ಆದರೆ, ಬಹಿರಂಗ ಸಭೆಗಳಲ್ಲಿ ಮೌನವಾಗಿರುವ ಮೂಲಕ ರಾಜಕೀಯ ಜಾಣ್ಮೆ ಕೂಡ ಪ್ರದರ್ಶಿಸುತ್ತಿದ್ದಾರೆ.
ಸಾಮಾಜಿಕ ನ್ಯಾಯ ಪಾಲನೆ ಸವಾಲ್: ಪ್ರಸ್ತುತ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಪಾಲನೆಗೆ ಕಾಂಗ್ರೆಸ್ ವಿಶೇಷ ಆದ್ಯತೆ ನೀಡಲಿದೆ. ಲಿಂಗಾಯತ, ಒಕ್ಕಲಿಗ, ಮುಸ್ಲಿಂ, ದಲಿತ ಬಲಗೈ, ಎಸ್‌ಟಿ, ಕಾಡುಗೊಲ್ಲ ಹಾಗೂ ದಲಿತ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಲು ನಿರ್ಧರಿಸಿದ್ದು ಎಲ್ಲರಿಗೂ ಅವಕಾಶ ಮಾಡಿಕೊಡುವುದು ಸಾವಲೆನಿಸಿದೆ.
ಕನಿಷ್ಠ 4 ಕ್ಷೇತ್ರದಲ್ಲಿ ಯುವಕರಿಗೆ ಟಿಕೆಟ್: ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ ಸುರ್ಜೇವಾಲ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಜತೆ ಮಾತುಕತೆ ನಡೆಸಿರುವುದು.
ಒಕ್ಕಲಿಗರಿಗೆ ಮಣೆ: ಕುಣಿಗಲ್, ತುರುವೇಕೆರೆ, ತುಮಕೂರು ಗ್ರಾಮಾಂತರ ಹಾಗೂ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗರಿಗೆ ಮಣೆ ಹಾಕಲು ನಿರ್ಧರಿಸಲಾಗಿದ್ದು ಈ ಸಮುದಾಯ ಜಿಲ್ಲೆಯಲ್ಲಿ ಸಿಂಹಪಾಲು ಪಡೆಯಲಿದೆ. ಸಂಖ್ಯೆಯಲ್ಲಿ ಹೆಚ್ಚಾಗಿದ್ದರೂ ಲಿಂಗಾಯತರಿಗೆ ಸದ್ಯಕ್ಕೆ ತಿಪಟೂರಿನಲ್ಲಿ ಅವಕಾಶವಿದೆ, ಚಿಕ್ಕನಾಯಕನಹಳ್ಳಿ ಲಿಂಗಾಯತ ಸಮುದಾಯದ ಪ್ರಮುಖ ನಾಯಕರೊಬ್ಬರು ಕೈ ಸೇರ್ಪಡೆಯ ಸಾಧ್ಯತೆಯಿದ್ದು, ಅಲ್ಲಿಯೂ ಒಂದು ಅವಕಾಶವಾಗಬಹುದು, ನಿರೀಕ್ಷೆಯಂತೆ ಕೊರಟಗೆರೆ ದಲಿತ ಬಲಗೈ, ಮಧುಗಿರಿ ಎಸ್‌ಟಿ, ತುಮಕೂರು ನಗರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಖಚಿತ. ಆದರೆ, ಶಿರಾ, ಪಾವಗಡ ಕ್ಷೇತ್ರದ ಟಿಕೆಟ್ ಹಂಚಿಕೆ ಕಾಂಗ್ರೆಸ್ ಮುಖಂಡರ ತಲೆಬಿಸಿ ಹೆಚ್ಚಿಸಿದ್ದು, ಪಾವಗಡದಲ್ಲಿ ಭೋವಿ ಸಮುದಾಯದ ಹಾಲಿ ಶಾಸಕ ವೆಂಕಟರಮಣಪ್ಪ ಅವರಿದ್ದರೂ ದಲಿತ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂಬ ಒತ್ತಡವಿದೆ, ತಮ್ಮತಮ್ಮ ಗೆಲುವಿಗೆ ಅನುಕೂಲವಾಗುವಂತೆ ಜಿಲ್ಲೆಯ ಮುಖಂಡರ ಗೇಮ್‌ಪ್ಲಾನ್ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅವರ ಹೆಸರನ್ನು ಮುನ್ನೆಲೆಗೆ ತಂದು ನಿಲ್ಲಿಸಿದೆ.
ಆಯ್ಕೆಯೇ ಕಗ್ಗಂಟು: ಎಐಸಿಸಿ ಸದಸ್ಯರಾದ ಕೆ.ಎಚ್.ಮುನಿಯಪ್ಪ ಹಠಹಿಡಿದು ಪಾವಗಡ ಟಿಕೆಟ್ ದಲಿತ ಎಡಗೈ ಸಮುದಾಯಕ್ಕೆ ಪಡೆಯುವ ಅವಕಾಶವಿದ್ದು, ಕದನ ಕುತೂಹಲ ಮೂಡಿಸಿದೆ, ಶಿರಾ ಕ್ಷೇತ್ರದಲ್ಲಿ ಕಾಡುಗೊಲ್ಲರಿಗೆ ಅವಕಾಶ ಕೊಟ್ಟರೆ ಕುಂಚಿಟಿಗರಿಗೆ ಎಲ್ಲಿ ಎಂಬ ಪ್ರಶ್ನೆಯಿದೆ. ಕುಂಚಿಟಿಗರಿಗೆ ಕೊಟ್ಟರೆ ಕಾಡುಗೊಲ್ಲರ ವಿರೋಧದ ಎಫೆಕ್ಟ್ ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ತಟ್ಟಲಿದೆ. ಮಧುಗಿರಿ ಕ್ಷೇತ್ರದಲ್ಲಿ ಸಾಮಾನ್ಯ ವರ್ಗಕ್ಕೆ ಟಿಕೆಟ್ ಕೊಡಿ ಎಂಬ ಕೂಗು ಮೊದಲಿನಿಂದಲೂ ಇದೆಯಾದರೂ ಪರಿಶಿಷ್ಟ ಪಂಗಡದ ಕೆ.ಎನ್.ರಾಜಣ್ಣ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ, ಒಟ್ಟಾರೆಯಾಗಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ತೊಂದರೆಯಾಗದಂತೆ ಅಳೆದು, ತೂಗಿ ಅಭ್ಯರ್ಥಿ ಆಯ್ಕೆ ಮಾಡುವುದು ಕಾಂಗ್ರೆಸ್‌ಗೆ ಸವಾಲಾಗಿದೆ.
ಪರಮೇಶ್ವರ ಮುನಿಸಿಗೆ ಸುರ್ಜೇವಾಲ ಮುಲಾಮು!: ಇತ್ತೀಚೆಗೆ ಕಾಂಗ್ರೆಸ್ ಘೋಷಿಸುತ್ತಿರುವ ಚುನಾವಣಾ ಭರವಸೆಗಳ ಬಗ್ಗೆ ಪ್ರಣಾಳಿಕೆ ಸಮಿತಿ ಅಧ್ಯಕ್ಷರಿಗೆ ಮಾಹಿತಿ ನೀಡದಿರುವ ಬಗ್ಗೆ ಡಾ.ಜಿ.ಪರಮೇಶ್ವರ ಅಸಮಧಾನಗೊಂಡಿದ್ದು ಕೆಲವು ಸಭೆಗಳಿಂದ ದೂರ ಉಳಿದಿರುವ ಬಗ್ಗೆ ಹೈಕಮಾಂಡ್ ಗಮನಹರಿಸಿದೆ.ಸತತ 8 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಮುನ್ನೆಡೆಸಿದ್ದ ಪರಮೇಶ್ವರ್ ಬಗ್ಗೆ ಹೈಕಮಂಡ್ ವಿಶೇಷ ಆಸ್ಥೆ ಇಟ್ಟುಕೊಂಡಿದೆ. ಜತೆಗೆ ಇತ್ತೀಚೆಗಷ್ಟೇ ಚಿತ್ರದುರ್ಗದಲ್ಲಿ ಎಸ್‌ಸಿ, ಎಸ್‌ಟಿ ಸಮಾವೇಶವನ್ನು ಯಶಸ್ವಿಯಾಗಿ ನಿರ್ವಹಿಸಿ ಪಕ್ಷದಲ್ಲಿನ ಪ್ರಮುಖ ನಾಯಕ ಎಂಬ ಸಂದೇಶ ಕೂಡ ರವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಡಾ.ಜಿ.ಪರಮೇಶ್ವರ ಅವರನ್ನು ಭೇಟಿಯಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜೇವಾಲ ಚರ್ಚಿಸಿದ ಬೆನ್ನಹಿಂದೆಯೇ, ಶುಕ್ರವಾರ ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ಪರಮೇಶ್ವರ ಬಹಿರಂಗವಾಗಿಯೇ ಕಾಣಿಸಿಕೊಂಡರು.