ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ವಿವಾಹಿತ ಮಹಿಳೆಯರ ಪರಿಚಯಿಸಿಕೊಂಡು ದೈಹಿಕ ಸಂಪರ್ಕ ಬೆಳೆಸಿ ವಿಡಿಯೊ ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿಯನ್ನು ಆಗ್ನೇಯ ವಿಭಾಗದ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂ ಮೂಲದ ಆರೋಪಿ ಫೈಸಲ್ (26). ಆರೋಪಿಯು ಈ ಹಿಂದೆ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆಗ ಇನ್‌ಸ್ಟಾಗ್ರಾಂ ಮೂಲಕ ವಿವಾಹಿತ ಮಹಿಳೆಯೊಬ್ಬರನ್ನು ಪರಿಚಯಿಸಿಕೊಂಡಿದ್ದ. ನಂತರ ಆ ಮಹಿಳೆಯನ್ನು ಪ್ರೀತಿಸುವ ನಾಟಕವಾಡಿ ದೈಹಿಕ ಸಂಪರ್ಕ ಬೆಳೆಸಿದ್ದ. ಅಲ್ಲದೆ, ಮಹಿಳೆಗೆ ಗೊತ್ತಾಗದಂತೆ ಅವರೊಂದಿಗಿನ ಲೈಂಗಿಕ ಕ್ರಿಯೆಯನ್ನು ತನ್ನ ಮೊಬೈಲ್ನಲ್ಲಿ ವಿಡಿಯೊ ಚಿತ್ರೀಕರಿಸಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲ ತಿಂಗಳುಗಳ ಹಿಂದೆ ಆರೋಪಿಯು ಬೆಂಗಳೂರಿನ ಕಂಪನಿ ತೊರೆದು ಚೆನ್ನೈಗೆ ಹೋಗಿ ಕೆಲಸಕ್ಕೆ ಸೇರಿದ್ದ. ಬಳಿಕ ಆ ಮಹಿಳೆಗೆ ಕರೆ ಮಾಡಿ ಅವರೊಂದಿಗಿನ ಲೈಂಗಿಕ ಕ್ರಿಯೆಯ ವಿಡಿಯೊ ಕಳುಹಿಸಿ ಬೆದರಿಕೆ ಹಾಕಿದ್ದ. ಚೆನ್ನೈಗೆ ಬಂದು ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಬೇಕು. ಇಲ್ಲವಾದರೆ ಆ ವಿಡಿಯೊವನ್ನು ಮಹಿಳೆಯ ಪತಿಗೆ ಮತ್ತು ಸ್ನೇಹಿತರಿಗೆ ಕಳುಹಿಸುವುದಾಗಿ ಹೇಳಿ ಬ್ಲಾಕ್‌ಮೇಲ್ ಮಾಡುತ್ತಿದ್ದ. ಇದರಿಂದ ನೊಂದ ಮಹಿಳೆ ದೂರು ಕೊಟ್ಟಿದ್ದರು. ಈ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಸಂತ್ರಸ್ತ ಮಹಿಳೆಯನ್ನು ಚೆನ್ನೈಗೆ ಕರೆದೊಯ್ದು ಅವರಿಂದಲೇ ಆರೋಪಿಗೆ ಕರೆ ಮಾಡಿಸಿದ್ದರು. ನಂತರ ಮಹಿಳೆಯು ತಿಳಿಸಿದ ಜಾಗಕ್ಕೆ ಬಂದ ಆರೋಪಿ ಫೈಸಲ್ನನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲವು ಮಹಿಳೆಯರಿಗೆ ಬ್ಲ್ಯಾಕ್‌ಮೇಲ್:
ಫೈಸಲ್, ಅಪರಿಚಿತ ವ್ಯಕ್ತಿಗಳ ೆಟೊ ಹಾಗೂ ವೈಯಕ್ತಿಕ ವಿವರ ದುರ್ಬಳಕೆ ಮಾಡಿಕೊಂಡು ಇನ್‌ಸ್ಟಾಗ್ರಾಂನಲ್ಲಿ ಮೂರ್ನಾಲ್ಕು ನಕಲಿ ಖಾತೆ ತೆರೆದಿದ್ದ. ಇನ್‌ಸ್ಟಾಗ್ರಾಂನಲ್ಲಿ ಹೆಚ್ಚು ಸಕ್ರಿಯವಾಗಿರುವ ವಿವಾಹಿತ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಸ್ನೇಹ ಬೆಳೆಸಿ ಲೈಂಗಿಕ ಕ್ರಿಯೆಗೆ ಕರೆಯುತ್ತಿದ್ದ. ಪ್ರೀತಿಯ ಸೋಗಿನಲ್ಲಿ ಮಹಿಳೆಯರನ್ನು ನಂಬಿಸಿ ಅವರೊಂದಿಗೆ ದೈಹಿಕ ಸಂಪರ್ಕ ಬೆಳೆಸುತ್ತಿದ್ದ. ಮಹಿಳೆಯರ ಜತೆಗಿನ ಲೈಂಗಿಕ ಕ್ರಿಯೆಯ ವಿಡಿಯೊ ಚಿತ್ರೀಕರಿಸಿಕೊಂಡು ಬ್ಲಾಕ್‌ಮೇಲ್ ಮಾಡಿ ಹಣ ಪೀಕುತ್ತಿದ್ದ. ಆರೋಪಿಯು ಸಾಕಷ್ಟು ಮಹಿಳೆಯರಿಗೆ ಇದೇ ರೀತಿ ಬ್ಲಾಕ್‌ಮೇಲ್ ಮಾಡಿ ಅವರೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಯ ಮೊಬೈಲ್ನಲ್ಲಿ ಹಲವು ಮಹಿಳೆಯರ ಜತೆಗಿನ ಲೈಂಗಿಕ ಕ್ರಿಯೆಯ ದೃಶ್ಯಾವಳಿ ತುಣುಕುಗಳು ಪತ್ತೆಯಾಗಿವೆ. ಹೆಚ್ಚಿನ ತನಿಖೆಗಾಗಿ ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ಎಂದು ಅಧಿಕಾರಿಗಳು ಹೇಳಿದ್ದಾರೆ.