ನ್ಯೂಸ್

ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿ ಸೆರೆ

ಬೆಂಗಳೂರು: ವಾಯು ವಿಹಾರದಲ್ಲಿ ತೊಡಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಕ್ಯಾಬ್ ಚಾಲಕನೊಬ್ಬನನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೊತ್ತನೂರು ದಿಣ್ಣೆ ನಿವಾಸಿ ಸುರೇಶ್(೨೫) ಬಂಧಿತ. ಆ.೨ ರಂದು ಮುಂಜಾನೆ ಸುಮಾರು ೫.೧೫ಕ್ಕೆ ಕೃಷ್ಣಾನಂದನಗರದಲ್ಲಿ ಈ ಘಟನೆ ನಡೆದಿದೆ. ೩೫ ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕನಕಪುರ ತಾಲೂಕು ಸಂತೆಕೋಡಿಹಳ್ಳಿ ಗ್ರಾಮದ ಆರೋಪಿ ಸುರೇಶ್ ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿದ್ದಾನೆ. ಕೋಣನಕುಂಟೆ ಭಾಗದಲ್ಲಿ ಖಾಸಗಿ ಕಂಪನಿ ಉದ್ಯೋಗಿಗಳನ್ನು ಮನೆಯಿಂದ ಪಿಕಾಪ್ ಮಾಡಿ ಕಂಪನಿಗೆ ಬಿಟ್ಟು ಸಂಜೆ ಕಂಪನಿಯಿಂದ ಪಿಕಾಪ್ ಮಾಡಿ ಮನೆಗೆ ಬಿಡುವ ಕೆಲಸ ಮಾಡುತ್ತಾನೆ.
ಚುಂಬಿಸಲು ಯತ್ನ:
ಆ.೨ ರಂದು ಮುಂಜಾನೆ ಮಹಿಳೆಯೊಬ್ಬರು ಕೃಷ್ಣಾನಂದ ನಗರದಲ್ಲಿ ವಾಯು ವಿಹಾರದಲ್ಲಿ ತೊಡಗಿದ್ದರು. ಈ ವೇಳೆ ಆರೋಪಿ ಸುರೇಶ್, ಹಿಂದಿನಿಂದ ಓಡಿ ಬಂದು ಆಕೆಯನ್ನು ತಬ್ಬಿಕೊಂಡು ಚುಂಬಿಸಲು ಮುಂದಾಗಿದ್ದ. ಈ ವೇಳೆ ಮಹಿಳೆ ತೀವ್ರ ಪ್ರತಿರೋಧವೊಡ್ಡಿ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದ್ದರು. ಆದರೂ ಬೆನ್ನಟ್ಟಿದ ಆರೋಪಿಯು ಮತ್ತೆ ಆ ಮಹಿಳೆಯನ್ನು ಹಿಡಿದುಕೊಂಡು ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ್ದ. ಬಳಿಕ ಮಹಿಳೆ ಆತನದಿಂದ ಬಿಡಿಸಿಕೊಂಡು ಮನೆಗೆ ಓಡಿ ಹೋಗಿದ್ದರು. ಈ ದೃಶ್ಯ ಘಟನಾ ಸ್ಥಳದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಘಟನೆಯಿಂದ ಶಾಕ್‌ಗೆ ಒಳಗಾಗಿದ್ದ ಮಹಿಳೆ ಆರಂಭದಲ್ಲಿ ದೂರು ನೀಡರಲಿಲ್ಲ. ಸುಧಾರಿಸಿಕೊಂಡು ಆ.೪ರಂದು ಸಂಜೆ ಕೋಣನಕುಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಘಟನಾ ಸ್ಥಳದ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದ ಪೊಲೀಸರು. ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯ ವಿಚಾರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.