ನ್ಯೂಸ್

ಕೇಜಿಗಟ್ಟಲೆ ಚಿನ್ನ ದೋಚಿದ್ದ ಆರೋಪಿ ಕೊನೆಗೂ ಖಾಕಿ ಬಲೆಗೆ

ಬೆಂಗಳೂರು: ಆಭರಣ ಸಗಟು ವ್ಯಾಪಾರಿಯಿಂದ ಚಿನ್ನ ಪಡೆದು ಕೋಟ್ಯಂತರ ರೂಪಾಯಿ ವಂಚಿಸಿದ್ದ ಆರೋಪಿಯನ್ನು ಸಂಪಂಗಿರಾಮನಗರ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ ಮೋಹನ್ ಲಾಲ್ ಬಂಧಿತ. ನರ್ಗತಪೇಟೆಯಲ್ಲಿ ಸಗಟು ಚಿನ್ನದ ವ್ಯಾಪಾರಿ ರಾಮ್ ಲಾಲ್ ಎಂಬಾತ ನೀಡಿದ ದೂರಿದ ಮೇರೆಗೆ ಆರೋಪಿಯನ್ನು ಬಂಧಿಸಿ 84 ಲಕ್ಷ ರೂ. ಮೌಲ್ಯದ 1.399 ಕೆಜಿ ಆಭರಣ ಮತ್ತು ಗಟ್ಟಿಯನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಸ್ಥಾನ ಮೂಲದ ರಾಮ್‌ಲಾಲ್ ಮತ್ತು ಮೋಹನ್ ಲಾಲ್ ಹಲವು ವರ್ಷಗಳಿಂದ ಚಿನ್ನದ ವ್ಯಾಪಾರ ಮಾಡುತ್ತಿದ್ದಾರೆ. ಸಗಟು ದರದಲ್ಲಿ ಚಿನ್ನವನ್ನ ರಾಮ್ ಲಾಲ್ ಮಾರಾಟ ಮಾಡಿದರೆ ಆರೋಪಿ ಮೋಹನ್ ಲಾಲ್, ಚಿನ್ನಾಭರಣ ಮಾರಾಟ ಮಾಡುತ್ತಿದ್ದ. 1 ವರ್ಷದ ಹಿಂದೆ ರಾಮ್ ಲಾಲ್ ಬಳಿ 3 ಕೆಜಿ ಚಿನ್ನ ಪಡೆದುಕೊಂಡಿದ್ದ ಮೋಹನ್ ಲಾಲ್, ಹಣ ಪಾವತಿ ಮಾಡಿರಲಿಲ್ಲ.

ಇದೇ ವಿಷಯ ಸಂಬಂಧ ಮಾತನಾಡಲು ಅಕ್ಟೋಬರ್ 25ರಂದು ರಾಮ್ ಲಾಲ್ ನನ್ನ ಮನೆಗೆ ಮೋಹನ್ ಲಾಲ್‌ನನ್ನು ಕರೆಯಿಸಿಕೊಂಡಿದ್ದರು. ಶೌಚಗೃಹಕ್ಕೆ ಹೋಗಿ ಬರುವಷ್ಟರಲ್ಲಿ ದೇವರ ಮನೆಯಲ್ಲಿದ್ದ 155 ಗ್ರಾಂ ಚಿನ್ನಾಭರಣ ಕದ್ದು ಮೋಹನ್ ಲಾಲ್ ಪರಾರಿಯಾಗಿದ್ದ. ಇದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಕುರಿತು ರಾಮ್ ಲಾಲ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ಎಂ.ಎ. ಹರೀಶ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದ್ದಾರೆ. ರಾಮ್ ಲಾಲ್ ಕಡೆಯಿಂದ ಪಡೆಯುತ್ತಿದ್ದ ಚಿನ್ನಾಭರಣವನ್ನು ಮಾರಾಟ ಮಾಡಿ ಬಂದ ಹಣವನ್ನು ಮೋಹನಲ್ ಲಾಲ್, ಕ್ಯಾಸಿನೋ ಮತ್ತು ಆನ್‌ಲೈನ್ ಗೇಮ್‌ನಲ್ಲಿ ಜೂಜಾಟವಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.