ನ್ಯೂಸ್

ಹತ್ಯೆಗೈದು ಮೃತದೇಹ ಐದಾರು ತುಂಡು ಮಾಡಿ ಮೋರಿಗೆ ಎಸೆದಿದ್ದ ಆರೋಪಿ ಬಂಧನ

ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಹಾಗೂ ಪತ್ನಿ ಜತೆ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಸ್ನೇಹಿತನನ್ನು ಹತ್ಯೆಗೈದು, ಬಳಿಕ ಮೃತದೇಹವನ್ನು ಐದಾರು ತುಂಡುಗಳನ್ನಾಗಿ ಮಾಡಿ ಬಿಸಾಡಿದ್ದ ಆರೋಪಿಯನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಜಿನಾಪುರ ನಿವಾಸಿ ಮಾಧವರಾವ್ (೪೧) ಬಂಧಿತ. ಆರೋಪಿ ಮೇ ೨೮ರಂದು ಸ್ನೇಹಿತ ಶ್ರೀನಾಥ್‌ನನ್ನು ಹತ್ಯೆಗೈದು, ರಾಮಮೂರ್ತಿನಗರ ಠಾಣೆ ವ್ಯಾಪ್ತಿಯ ಬೆಳತ್ತೂರು ಬಳಿಯ ಮೋರಿಯಲ್ಲಿ ಎಸೆದು ಪರಾರಿಯಾಗಿದ್ದ. ಈ ಸಂಬಂಧ ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಪತ್ತೆ ಪ್ರಕರಣ ದಾಖಲಾಗಿತ್ತು
ಮಾರ್ಗದರ್ಶಿ ಚಿಟ್ ಫಂಡ್‌ನ ಬಸವೇಶ್ವರನಗರ ಶಾಖೆಯಲ್ಲಿ ಡೆವಲಪ್‌ಮೆಂಟ್ ಅಧಿಕಾರಿಯಾಗಿದ್ದ ಶ್ರೀನಾಥ್, ಸಂಪಿಗೆಹಳ್ಳಿಯ ಅಂಜನಾದ್ರಿ ಲೇಔಟ್‌ನಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳ ಜತೆ ವಾಸವಾಗಿದ್ದರು. ಮೇ ೨೮ರಂದು ಕೆಲಸಕ್ಕೆಂದು ಹೋಗಿದ್ದ ಶ್ರೀನಾಥ್ ವಾಪಸ್ ಬಂದಿಲ್ಲ. ಅದರಿಂದ ಗಾಬರಿಗೊಂಡ ಪತ್ನಿ ಎಲ್ಲೆಡೆ ಹುಡುಕಾಟ ನಡೆಸಿ, ಮೇ ೨೯ರಂದು ಸಂಪಿಗೆಹಳ್ಳಿ ಠಾಣೆಗೆ ದೂರು ನೀಡಿದ್ದರು.

ಆರೋಪಿ ಪತ್ನಿ ಜತೆ ಅಕ್ರಮ ಸಂಬಂಧ!
ಹಣಕಾಸಿನ ವಿಚಾರವಾಗಿ ಮಾಧವರಾವ್ ಮನೆಗೆ ಬರುತ್ತಿದ್ದ ಶ್ರೀನಾಥ್, ಆತನ ಪತ್ನಿ ಜತೆ ಆತ್ಮೀಯವಾಗಿದ್ದ. ಈ ವಿಚಾರ ಮಾಧವರಾವ್‌ಗೆ ಗೊತ್ತಾಗಿ, ಮನೆಗೆ ಮತ್ತೊಮ್ಮೆ ಬಾರದಂತೆ ಶ್ರೀನಾಥ್‌ಗೆ ಎಚ್ಚರಿಕೆ ನೀಡಿದ್ದ. ಹೀಗಾಗಿ ಶ್ರೀನಾಥ್, ಮಾಧವರಾವ್‌ಗೆ ತನ್ನ ಹಣ ವಾಪಸ್ ಕೊಡುವಂತೆ ಒತ್ತಾಯಿಸುತ್ತಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಹಲವಾರು ಬಾರಿ ಜಗಳ ಉಂಟಾಗಿತ್ತು. ಈ ಮಧ್ಯೆ ಶ್ರೀನಾಥ್ ನಾಪತ್ತೆ ಬಗ್ಗೆ ತನಿಖೆ ಕೈಗೊಂಡಾಗ ಮಾಧವರಾವ್ ಹೆಸರು ಕೇಳಿ ಬಂದಿತ್ತು. ಬಳಿಕ ಬಾತ್ಮೀದಾರರ ಮಾಹಿತಿ ಆಧರಿಸಿ ವಿಜಿನಾಪುರದ ಆತನ ಮನೆಗೆ ಹೋದಾಗ ಆತ ನಾಪತ್ತೆಯಾಗಿದ್ದ ಜತೆಗೆ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿತ್ತು. ಬಳಿಕ ಮನೆ ಸಮೀಪದ ಸಿಸಿ ಕ್ಯಾಮರಾ ಹಾಗೂ ಮೊಬೈಲ್ ಸಿಡಿಆರ್ ಪರಿಶೀಲಿಸಿದಾಗ ಶ್ರೀನಾಥ್, ಆರೋಪಿ ಮಾಧವರಾವ್ ಮನೆಗೆ ಬಂದಿರುವುದು ಮತ್ತು ಲೋಕೇಷನ್ ಒಂದೆಡೆ ಇರುವುದು ಪತ್ತೆಯಾಗಿತ್ತು ಆ ಬಳಿಕ ತಾಂತ್ರಿಕ ತನಿಖೆ ನಡೆಸಿ ಆಂಧ್ರಪ್ರದೇಶದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ಕರೆ ತಂದು ವಿಚಾರಣೆ ನಡೆಸಿದಾಗ, ಮೇ ೨೮ರಂದು ಚೀಟಿ ಹಣದ ವಿಚಾರವಾಗಿ ಮಾತನಾಡಲು ಬಂದು ವಾಪಸ್ ಹೋಗಿದ್ದಾನೆ ಎಂದು ಹೇಳಿದ್ದ. ಬಳಿಕ ಜೂನ್ ೪ರಂದು ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿ ಕಳುಹಿಸಲಾಗಿತ್ತು. ಆದರೆ, ಆರೋಪಿ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಪರಾರಿಯಾಗಿದ್ದ. ಆ ಬಳಿಕ ಅನುಮಾನಗೊಂಡು ಕೆ.ಆರ್.ಪುರ ಬಸ್ ನಿಲ್ದಾಣದಲ್ಲಿ ವಶಕ್ಕೆ ಪಡೆದು ಠಾಣೆಯಲ್ಲಿ ತೀವ್ರ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಾಯಿಬಿಟ್ಟಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.