ನ್ಯೂಸ್

ಕುಡಿದ ಮತ್ತಿನಲ್ಲಿ ಯುವಕನ ಕೊಂದು ನಶೆ ಇಳಿದ ಮೇಲೆ ಪೊಲೀಸರಿಗೆ ಶರಣಾದ ಆರೋಪಿ

ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರ ನಡುವೆ ಉಂಟಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ.

ಅರುಂಧತಿನಗರ ನಿವಾಸಿ ಚೇತನ್ (21) ಮೃತ ಯುವಕ. ಕೆಂಗೇರಿ ಉಪನಗರ ನಿವಾಸಿ ಅಮಾನವುಲ್ಲಾ ಬೇಗ್ ಬಂಧಿತ. ಕೆಂಗೇರಿ ಉಪನಗರದ ಕೊಮ್ಮಘಟ್ಟ ಮೈದಾನದಲ್ಲಿ ಮಂಗಳವಾರ ರಾತ್ರಿ 11 ಗಂಟೆಯಲ್ಲಿ ಮದ್ಯದ ಅಮಲಿನಲ್ಲಿ ಇಬ್ಬರು ಮುಖಾಮುಖಿ ಆದ ಸಮಯದಲ್ಲಿ ಕೊಲೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿರುದ್ಯೋಗಿ ಚೇತನ್ ಮತ್ತು ಜ್ಞಾನಭಾರತಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್‌ಟಿಒ) ಏಜೆಂಟ್ ಆಗಿದ್ದ ಅಮಾನವುಲ್ಲಾ ಬೇಗ್‌ಗೆ ಪರಸ್ಪರ ಪರಿಚಯ ಇತ್ತು. ಈ ಹಿಂದೆಯೇ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿತ್ತು. ಮಂಗಳವಾರ ರಾತ್ರಿ ಕೊಮ್ಮಘಟ್ಟ ಬಾರ್‌ನಲ್ಲಿ ಮದ್ಯ ಸೇವನೆಗೆ ಹೋದಾಗ ಇಬ್ಬರು ಪರಸ್ಪರ ಎದುರಾಗಿದ್ದರು. ಮದ್ಯದ ಅಮಲಿನಲ್ಲಿ ಇಬ್ಬರ ನಡುವೆ ಗಲಾಟೆ ಶುರುವಾಗಿದೆ.

ಅಲ್ಲಿಂದ ಹೊರಬಂದು ಮೈದಾನದಲ್ಲಿ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಕೊನೆಗೆ ಚೇತನ್ ಕೆಳಗ್ಗೆ ಬಿದ್ದಾಗ ತಲೆ ಮೇಲೆ ಕಲ್ಲು ಎತ್ತಿಹಾಕಿ ಆರೋಪಿ ಕೊಲೆ ಮಾಡಿ ಅಲ್ಲಿಂದ ಪರಾರಿ ಆಗಿದ್ದ. ಬುಧವಾರ ಬೆಳಗಿನ ಜಾವ ಸಾರ್ವಜನಿಕರು ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಷ್ಟೊತ್ತಿಗೆ ಆರೋಪಿ ಕೆಂಗೇರಿ ಠಾಣೆಗೆ ಹೋಗಿ ಶರಣಾಗಿದ್ದಾನೆ. ಕೊಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.