ಬೆಂಗಳೂರು: ಪ್ರತಿಷ್ಠಿತ ಖಾಸಗಿ ಕಂಪನಿ ಉಪಾಧ್ಯಕ್ಷೆ ಮನೆ ಕಳ್ಳತನ ಪ್ರಕರಣದಲ್ಲಿ ಪೊಲೀಸ್ ವಿಚಾರಣೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದ ಕಾರು ಚಾಲಕನೇ ಆರೋಪಿ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪುಲಿಕೇಶಿನಗರದ ಗ್ರೀನ್ ಅವಿನ್ಯೂ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ಖಾಸಗಿ ಕಂಪನಿ ಉಪಾಧ್ಯಕ್ಷೆ ಗಿರಿಜಾ ಅವರ ಕಾರು ಚಾಲಕ ಜಿಮೋನ್ ವರ್ಗೀಸ್ (43) ಮೃತ ಆರೋಪಿ.
ಮೃತನ ಪತ್ನಿಯೇ ತನ್ನ ಪತಿ ಕಳವು ಮಾಡಿದ್ದ 1.50 ಕೋಟಿ ರೂ. ಮೌಲ್ಯದ ವಿವಿಧ ಬಗೆಯ 38 ಆಭರಣಗಳನ್ನು ಪುಲಿಕೇಶಿನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ ಎಂದು ಪೂರ್ವ ವಿಭಾಗ ಡಿಸಿಪಿ ಡಾ. ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ಗಿರಿಜಾ ಅವರ ಮನೆಯಲ್ಲಿ ಕೇರಳ ಮೂಲದ ಜಿಮೋನ್ ವರ್ಗೀಸ್ ಸೇರಿದಂತೆ ನಾಲ್ವರು ಮನೆ ಕೆಲಸ ಮಾಡುತ್ತಿದ್ದರು. ಜಿಮೋನ್, ಕಾರು ಚಾಲಕನಾಗಿದ್ದ. ಆ.17ರಂದು ಗಿರಿಜಾ, ತನ್ನ ಮನೆಯಲ್ಲಿ ಮೇ ಯಿಂದ ಇಲ್ಲಿಯವರೆಗೂ ವಿವಿಧ ಬಗೆಯ 2.50 ಕೋಟಿ ರೂ. ಮೌಲ್ಯದ ಆಭರಣ ಕಳವಾಗಿವೆ. ಮನೆಯಲ್ಲಿ ನಾಲ್ವರು ಕೆಲಸಗಾರರು ಇದ್ದು, ಎಲ್ಲರಿಗೂ ಮನೆಯಲ್ಲಿ ಓಡಾಡಲು ಮುಕ್ತ ಅವಕಾಶ ಕಲ್ಪಿಸಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಿದ್ದರು.
ಇದರ ಮೇರೆಗೆ ಎ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಸ್ಥಳಕ್ಕೆ ಭೇಟಿ ಕೊಟ್ಟು ಸಾಕ್ಷಾೃಧಾರಗಳನ್ನು ಸಂಗ್ರಹಿಸಿ ನಾಲ್ವರು ಮನೆ ಕೆಲಸಗಾರರಿಗೆ ನೋಟಿಸ್ ಕೊಟ್ಟು ಠಾಣೆಗೆ ವಿಚಾರಣೆಗೆ ಬರುವಂತೆ ಸೂಚಿಸಿದ್ದರು.
ಆ.21ರಂದು ಕೆಲಸ ಮಾಡುತ್ತಿದ್ದ ಅಪಾರ್ಟ್‌ಮೆಂಟ್‌ನಲ್ಲಿಯೇ ಕಾರು ಚಾಲಕ ಜಿಮೋನ್ ವರ್ಗೀಸ್, 7 ಪುಟಗಳ ಡೆತ್‌ನೋಟ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಮಲಯಾಳಂನಲ್ಲಿ ಬರೆದಿದ್ದ ಡೆತ್‌ನೋಟ್‌ನಲ್ಲಿ ತನ್ನ ಮಾಲಕಿ ವಿರುದ್ಧ ಆರೋಪ ಮಾಡಿದ್ದ. ಚಿನ್ನಾಭರಣ ಕಳವು ಮಾಡಿಲ್ಲ.
ಆದರೂ ಸುಳ್ಳು ದೂರು ಕೊಟ್ಟಿದ್ದಾರೆ ಎಂದು ಆರೋಪಿಸಿದ್ದ. ಈ ಬಗ್ಗೆ ಮೃತನ ಪತ್ನಿ ದೂರು ಕೊಡಲು ಸಿದ್ದವಿರಲಿಲ್ಲ. ಡೆತ್‌ನೋಟ್ ಆಧಾರದ ಮೇಲೆ ಸ್ವಯಂ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಮತ್ತೊಂದೆಡೆ ಮನೆ ಕಳ್ಳತನ ಪ್ರಕರಣದಲ್ಲಿ ತನಿಖೆ ಮುಂದುವರಿಸಲಾಗಿತ್ತು.
ಆಭರಣ ಬಾಕ್ಸ್ ಮೇಲೆ ಜಿಮೋನ್ ಬೆರಳಚ್ಚು ಇದ್ದ ಖಚಿತ ಸಾಕ್ಷ್ಯ ಲಭ್ಯವಾಗಿತ್ತು. ಕೇರಳಕ್ಕೆ ಹೋಗಿ ಜಿಮೋನ್ ಮನೆ ಮತ್ತು ಕುಟುಂಬ ಸದಸ್ಯರ ಮೇಲೆ ನಿಗಾವಹಿಸಿ ಮಾಹಿತಿ ಕಲೆ ಹಾಕಲಾಗಿತ್ತು. ವಿಷಯ ತಿಳಿದ ಮೃತನ ಪತ್ನಿ, ಆ.30ಕ್ಕೆ ಪುಲಿಕೇಶಿನಗರ ಠಾಣೆಗೆ ಬಂದು 1.50 ಕೋಟಿ ರೂ. ಮೌಲ್ಯದ 38 ಬಗೆಯ ಆಭರಣಗಳನ್ನು ಒಪ್ಪಿಸಿದ್ದಾರೆ. ತನ್ನ ಪತಿ ಆತ್ಮಹತ್ಯೆ ಪ್ರಕರಣದ ಸಂಬಂಧ ದೂರು ಕೊಡುವ ಬಗ್ಗೆ ನಿರ್ಧರ ಮಾಡಿಲ್ಲ ಎಂದು ಹೇಳಿರುವುದಾಗಿ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
12 ಆಭರಣ ಅಲ್ಲ, 40 :
ಆರೋಪಿ ಜಿಮೋನ್ ವರ್ಗೀಸ್, ತನ್ನ ಮಾಲಕಿ ಮನೆಯಲ್ಲಿ ಒಂದೊಂದಾಗಿ ಆಭರಣ ಕಳವು ಮಾಡಿ ಕೇರಳದಲ್ಲಿ ತನ್ನ ಮನೆಯಲ್ಲಿ ಬಚ್ಚಿಟ್ಟಿದ್ದ. ಕೇರಳದ ಕೆನರಾ ಬ್ಯಾಂಕ್‌ನಲ್ಲಿ 2 ಆಭರಣ ಅಡವಿಟ್ಟಿರುವುದು ಗೊತ್ತಾಗಿದೆ. ಪೊಲೀಸರ ತನಿಖೆಗೆ ಹೆದರಿ ಜಿಮೋನ್, ಪತ್ನಿ 38 ಬಗೆಯ ಆಭರಣ ತಂದುಕೊಟ್ಟಿದ್ದಾರೆ. ದೂರಿನಲ್ಲಿ ಗಿರಿಜಾ ಅವರು 2.50 ಕೋಟಿ ರೂ. ಮೌಲ್ಯದ 12 ಆಭರಣ ಎಂದು ಉಲ್ಲೇಖಿಸಿದ್ದರು. 40 ಆಭರಣ ಎಂಬುದು ಬೆಳಕಿಗೆ ಬಂದಿದೆ. ವಿದೇಶಿ ಕರೆನ್ಸಿ ಸಹ ಪತ್ತೆಯಾಗಿದ್ದು, ಎಲ್ಲವನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.