ನ್ಯೂಸ್

ನೀನೇ ಧನ್ಯ

ಮೋಹನ್​ ಶೆಟ್ಟಿ

ಗುರುಕುಲದಲ್ಲಿ ಅನೇಕ ಶಿಷ್ಯಂದಿರಿದ್ದರು. ಒಮ್ಮೆ ಗುರುವು ಶಿಷ್ಯಂದಿರಿಗೆ ಮೋಕ್ಷ ಅಥವಾ ಭಗವಂತನ ದರ್ಶನ ಪಡೆಯುವುದಕ್ಕೆ ನಾಮಜಪದ ಮಹತ್ವವನ್ನು ತಿಳಿಸಿದರು. ಶಿಷ್ಯರಿಗೆ ಮಂತ್ರವನ್ನು ಅನುಗ್ರಹಿಸಿದರು. ಪ್ರತಿನಿತ್ಯ ಹೆಚ್ಚುಹೆಚ್ಚು ಜಪವನ್ನು ಏಕಾಗ್ರತೆ ಹಾಗೂ ಅದರ ಗುಣಮಟ್ಟದ ಬಗ್ಗೆ ಜಾಗೃತವಹಿಸಿ ಮಾಡಿರಿ. ಅದರಿಂದ ಭಗವಂತನ ದರ್ಶನವು ಪ್ರಾಪ್ತವಾಗುತ್ತದೆ ಎಂದರು.

ಗುರುವಿನ ಅಣತಿಯಂತೆ ಶಿಷ್ಯರು ಪ್ರಾಮಾಣಿಕವಾಗಿ ಜಪವನ್ನು ಮಾಡಲಾರಂಭಿಸಿದರು. ಕೆಲವು ದಿವಸಗಳಾದ ಮೇಲೆ ಗುರುಗಳು ಶಿಷ್ಯರನ್ನು ಕರೆದರು. ಯಾರು ಎಷ್ಟೆಷ್ಟು ಜಪವನ್ನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಸಾವಿರ, ಎರಡು ಸಾವಿರ, ಐದು ಸಾವಿರ, ಹತ್ತು ಸಾವಿರ ಎಂದು ಶಿಷ್ಯರು ತಾವು ಮಾಡುತ್ತಿದ್ದ ಪ್ರತಿನಿತ್ಯದ ಜಪದ ಸಂಖ್ಯೆಯನ್ನು ಹೇಳಿದರು. ಒಬ್ಬ ಶಿಷ್ಯನು ಮಾತ್ರ ಒಂದು ಬಾರಿ ಎಂದನು. ಇತರ ಶಿಷ್ಯರು ನಗಲಾರಂಭಿಸಿದರು. ಅವನನ್ನು ಗುರುಗಳು ಚೆನ್ನಾಗಿ ಬೈಯುತ್ತಾರೆ ಎಂದುಕೊಂಡರು. ಸಮಾಧಾನ ಚಿತ್ತದಿಂದಿದ್ದ ಗುರುಗಳು, ವತ್ಸ, ನಿನಗೆ ಸಮಯ ಸಿಗಲಿಲ್ಲವೆ? ಯಾವ ಕಾರಣದಿಂದ ಹಾಗೆ ಹೇಳುತ್ತಿರುವೆ ಎಂದು ಶಿಷ್ಯನನ್ನು ಪ್ರಶ್ನಿಸಿದರು.

ಗುರುಗಳೇ, ನಾನು ಮಂತ್ರಜಪವನ್ನು ಮಾಡಲು ಪ್ರಾರಂಭಿಸುತ್ತಿದ್ದಂತೆಯೇ ದೇವರಲ್ಲಿ ನನ್ನ ಮನಸ್ಸು ತಲ್ಲೀನವಾಗಿಬಿಡುತ್ತಿದೆ. ಅವನ ಸುಂದರ ರೂಪವನ್ನು ಕಂಡು ಮನಸ್ಸು ಆನಂದದ ಸಾಗರದಲ್ಲಿ ಮುಳುಗಿದಂತೆ ಅನುಭವವಾಗುತ್ತದೆ. ಮನಸ್ಸು ಸಂಪೂರ್ಣವಾಗಿ ಭಗವಂತನಲ್ಲಿ ತಲ್ಲೀನವಾಗಿ, ಮಂತ್ರ ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಉತ್ತರಿಸಿದನು. ಗುರುಗಳು ಆನಂದಬಾಷ್ಪಗಳನ್ನು ಸುರಿಸುತ್ತಾ, ತಮ್ಮ ಆಸನದಿಂದ ಎದ್ದು, ‘ನೀನೇ ಧನ್ಯ’ ಎಂದು ಶಿಷ್ಯನನ್ನು ಆಲಂಗಿಸಿಕೊಂಡರು. ಶಿಷ್ಯರೇ ನೀವು ಭಗವಂತನ ದರ್ಶನಕ್ಕೆಂದು ಜಪವನ್ನು ಮಾಡುತ್ತಿದ್ದೀರಿ. ಆದರೆ ಇವನು ಆಗಲೇ ಆ ಸಿದ್ಧಿಯನ್ನು ಪಡೆದುಬಿಟ್ಟಿದ್ದಾನೆ ಎಂದರು.

ಶಿಷ್ಯರು ತಮ್ಮ ಅಜ್ಞಾನ ಹಾಗೂ ಸಂಕುಚಿತ ಮನೋಭಾವಕ್ಕೆ ನಾಚಿ ಅವನ ಬಳಿ ಕ್ಷಮಾಪಣೆ ಕೇಳಿದರು. ಭಕ್ತಿ ಎಂದರೆ ಭಗವಂತನೆಡೆಗಿರುವ ಪರಮ ಪ್ರೇಮ ಸ್ವರೂಪ. ಅದನ್ನು ಪಡೆಯಲು, ನಾವು ಜಪ, ಧ್ಯಾನ, ಪಾರಾಯಣ, ಪ್ರಾರ್ಥನೆ, ತಪಸ್ಸು, ಇತ್ಯಾದಿಯನ್ನು ಮಾಡಬೇಕಿದೆ.