ರಾಣೆಬೆನ್ನೂರ: ಪರಿಸರ ದಿನಾಚರಣೆಯನ್ನು ಒಂದು ದಿನ ಸಸಿನೆಟ್ಟು ಆಚರಿಸುವವರೇ ಹೆಚ್ಚು. ಆದರೆ, ಇಲ್ಲಿಯ ಶಹರ ಠಾಣೆ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ ಠಾಣೆಗೆ ಬಂದವರಿಗೊಂದು ಸಸಿ ಕೊಡುವ ಅಭಿಯಾನ ಆರಂಭಿಸುವ ಮೂಲಕ ಮಳೆಗಾಲ ಪೂರ್ತಿ ಪರಿಸರ ದಿನ ಆಚರಿಸಲು ಮುಂದಾಗಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಇಲ್ಲಿಯ ಶಹರ ಠಾಣೆಗೆ ದೂರು ನೀಡಲು, ಸಮಸ್ಯೆ ಹೇಳಿಕೊಳ್ಳಲು ಅಥವಾ ಇನ್ನಿತರ ಕಾರ್ಯಗಳಿಗಾಗಿ ಬಂದರೆ ಅವರಿಗೆ ಹೋಗುವಾಗ ಕಡ್ಡಾಯವಾಗಿ ಮಹಾಗಣಿ, ಪೇರು ಸೇರಿ ಇತರ ಜಾತಿಯ ಒಂದು ಸಸಿ ಕೊಟ್ಟು ಇದನ್ನು ನಿಮ್ಮ ಮನೆ ಮುಂದೆ ಅಥವಾ ಅಕ್ಕಪಕ್ಕದಲ್ಲಿ ನೆಟ್ಟು ಒಂದು ವರ್ಷಕಾಲ ಪೋಷಣೆ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
10 ಸಾವಿರ ಗುರಿ…
ಇಂದಿನ ದಿನಮಾನದಲ್ಲಿ ಬಿಸಿಲಿನ ಪ್ರಖರತೆ ವರ್ಷದಿಂದ ವರ್ಷಕ್ಕೆ ಏರಿಯಾಗುತ್ತಿದೆ. ರಾಣೆಬೆನ್ನೂರನಂತಹ ನಗರದಲ್ಲೂ 42 ಡಿಗ್ರಿಯಷ್ಟು ಬಿಸಿಲಿನ ತಾಪಮಾನ ವರದಿ ಆಗಿರುವುದು ನೋವಿನ ಸಂಗತಿ. ಬಿಸಿಲಿನ ಪ್ರಖರತೆ ಕಡಿಮೆ ಮಾಡಬೇಕು ಎಂದರೆ ಅದು ಸಸಿ ನೆಟ್ಟು ಗಿಡವನ್ನಾಗಿ ಬೆಳೆಸುವುದರಿಂದ ಮಾತ್ರ ಸಾಧ್ಯ.
ಇದನ್ನು ಮನಗಂಡ ಶಹರ ಠಾಣೆ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ 10 ಸಾವಿರ ಸಸಿಗಳನ್ನು ನಗರದೆಲ್ಲೆಡೆ ನೆಡುವ ಅಭಿಯಾನ ಆರಂಭಿಸಿದ್ದಾರೆ. ಅದಕ್ಕಾಗಿ ಅಲ್ಲಿಇಲ್ಲಿ ಹೋಗುವ ಬದಲು ಠಾಣೆಗೆ ಬರುವ ಸಾರ್ವಜನಿಕರಿಗೆ ಸಸಿ ಕೊಟ್ಟು ಪೋಷಣೆ ಮಾಡಲು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಪ್ರತಿ ವಾರ ಪರಿಶೀಲನೆ…
ಠಾಣೆಗೆ ಬಂದವರಿಗೆ ಪೊಲೀಸರು ಸಸಿ ಕೊಟ್ಟು ಕೈ ತೊಳೆದುಕೊಳ್ಳುತ್ತಿಲ್ಲ. ಬದಲಾಗಿ ಸಸಿ ಪಡೆದುಕೊಂಡವರ ಫೋನ್ ನಂಬರ್ ತೆಗೆದುಕೊಂಡು ಅವರನ್ನು ಸಸಿ ಬೆಳೆಸಿ ಅಭಿಯಾನದ ವಾಟ್ಸ್‌ಆಪ್ ಗ್ರುಪ್‌ಗೆ ಸೇರ್ಪಡೆ ಮಾಡುತ್ತಿದ್ದಾರೆ. ಸಸಿ ಪಡೆದುಕೊಂಡವರು ಸಸಿಗಳನ್ನು ನೆಟ್ಟು ಅದರ ಫೋಟೋ ವಾಟ್ಸ್‌ಅಪ್ ಗ್ರುಪ್‌ಗೆ ಕಳುಹಿಸಬೇಕು. ನಂತರ ಪ್ರತಿ ಭಾನುವಾರ ಸಸಿಗೆ ಆರೈಕೆ ಮಾಡುವ ಫೋಟೊವನ್ನು ಗ್ರುಪ್‌ಗೆ ಹಾಕಬೇಕು ಎಂದು ನಿಯಮಾವಳಿ ರೂಪಿಸಿದ್ದಾರೆ. ಅದರಂತೆ ಸಸಿ ಪಡೆದುಕೊಂಡವರು ಸಹ ಸಸಿ ನೆಟ್ಟು ಹಾಗೂ ಅದರ ಪೋಷಣೆ ಕುರಿತು ಫೋಟೊಗಳನ್ನು ವಾಟ್ಸ್‌ಆಪ್ ಗ್ರುಪ್‌ಗಳಿಗೆ ಶೇರ್ ಮಾಡುತ್ತಿದ್ದಾರೆ.
ಈಗಾಗಲೇ ನೂರಾರು ಜನರಿಗೆ ಸಸಿಗಳನ್ನು ಕೊಟ್ಟಿರುವ ಪೊಲೀಸರು ಪ್ರಸಕ್ತ ವರ್ಷದ ಮಳೆಗಾಲ ಮುಗಿಯುವವರೆಗೂ ಸಸಿ ಕೊಡುವ ಅಭಿಯಾನವನ್ನು ನಿರಂತರವಾಗಿ ಮುಂದುವರಿಸಲಿದ್ದಾರೆ. ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ ಅವರ ಈ ಕಾರ್ಯಕ್ಕೆ ಜನರಿಂದ ಭಾರಿ ಮೆಚ್ಚುಗೆ ಸಹ ದೊರೆಯುತ್ತಿದೆ.