ನ್ಯೂಸ್

ಅಪಾಯಕಾರಿ ಎಂಪಾಕ್ಸ್​ ಮೊದಲ ಪ್ರಕರಣ ದಾಖಲು; ಸರ್ಕಾರ ಹೇಳಿದ್ದೇನು.. ಸೋಂಕಿನ ಲಕ್ಷಣಗಳ ಮಾಹಿತಿ ಇಲ್ಲಿದೆ

ಬ್ಯಾಂಕಾಕ್​​​​​: ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿರುವ ಹೊಸ ಅಪಾಯಕಾರಿ ವೈರಸ್​​​ mpoxನ ಮೊದಲ ಶಂಕಿತ ಪ್ರಕರಣವನ್ನು ಥೈಲ್ಯಾಂಡ್ ಬುಧವಾರ(ಆಗಸ್ಟ್​​ 21) ವರದಿ ಮಾಡಿದೆ.

ಇತ್ತೀಚೆಗೆ ಆಫ್ರಿಕಾದಿಂದ ಆಗಮಿಸಿದ ಪ್ರಯಾಣಿಕನಲ್ಲಿ ಹೊಸ ಎಂಪಾಕ್ಸ್ ಪ್ರಕರಣವನ್ನು ಗುರುತಿಸಲಾಗಿದೆ. ಖಚಿತಪಡಿಸಿಕೊಳ್ಳಲು ಸೋಂಕಿತರನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಕಳಹಿಸಲಾಗಿದ್ದು ರಿಪೋರ್ಟ್​​ಗಾಗಿ ಕಾಯುತ್ತಿರುವುದಾಗಿ ರೋಗ ನಿಯಂತ್ರಣ ವಿಭಾಗದ ಮುಖ್ಯಸ್ಥ ಥಾಂಗ್​ಚಾಯ್​ತಿಳಿಸಿದರು.

ಸೋಂಕಿನ ವ್ಯಕ್ತಿ ಆಗಸ್ಟ್​​ 14ರಂದು ಬ್ಯಾಂಕಾಕ್​ಗೆ ಬಂದಿಳಿದಿದ್ದಾರೆ. ಅವರನ್ನು ಮರುದಿನ ಆಸ್ಪತ್ರೆಗೆ ಸೇರಿಸಲಾಗಿದೆ. ಸದ್ಯ ಅವರನ್ನು ಕ್ವಾರಂಟೈನ್​ ಮಾಡಲಾಗಿದೆ. ಅವರಲ್ಲಿ ಎಂಪಾಕ್ಸ್​​​ ರೋಗಲಕ್ಷಣಗಳಿವೆ. ಸದ್ಯ ಪ್ರಯೋಗಾಲಯದಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ಅಲ್ಲದೆ ಸೋಂಕಿತರ ನಿಕಟ ಸಂಪರ್ಕಕ್ಕೆ ಬಂದ 42 ಜನರನ್ನು ಆರೋಗ್ಯ ಅಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಥಾಂಗ್‌ಚಾಯ್ ತಿಳಿಸಿದರು.

ಎಂಪಾಕ್ಸ್ ಎಂದು ಕರೆಯಲ್ಪಡುವ ಮಂಕಿಪಾಕ್ಸ್​​​ ಪ್ರಕರಣಗಳು ಮತ್ತು ಸಾವುಗಳು ಆಫ್ರಿಕಾದಲ್ಲಿ ಹೆಚ್ಚುತ್ತಿವೆ. ಇತ್ತೀಚೆಗೆ ವಿಶ್ವಸಂಸ್ಥೆಯು ಈ ಸೋಂಕನ್ನು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದೆ. ಇದು ಪ್ರಾಣಿಗಳಿಂದ ಹರಡುವ ವೈರಸ್​ ಆಗಿದ್ದು, ನಿಕಟ ದೈಹಿಕ ಸಂಪರ್ಕದ ಮೂಲಕ ಮನುಷ್ಯರಲ್ಲಿ ಒಬ್ಬರಿದಂದ ಒಬ್ಬರಿಗೆ ಹರಡುತ್ತದೆ.

ಎಂಪಾಕ್ಸ್ ಸೋಂಕಿನ​​ ಲಕ್ಷಣಗಳು: ಸೋಂಕು ಬಂದ 3 ರಿಂದ 17ದಿನಗಳ ನಂತರ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ. ಜ್ವರ, ಚರ್ಮದ ದದ್ದುಗಳು, ಉಬ್ಬಿರುವ ರಕ್ತನಾಳಗಳು, ತಲೆನೋವು, ದೇಹದ ಸೆಳೆತ, ಬೆನ್ನು ನೋವು, ಶೀತ ಮತ್ತು ಆಯಾಸ ಇವು ಮಂಕಿಪಾಕ್ಸ್​​​​ನ ಲಕ್ಷಣಗಳಾಗಿವೆ. ಚರ್ಮದ ದದ್ದುಗಳ ಜತೆಗೆ ಮುಖ್ಯವಾಗಿ ಬಾಯಿ, ಕೈ ಮತ್ತು ಕಾಲುಗಳಲ್ಲಿಯೂ ದದ್ದುಗಳು ಸಂಭವಿಸುತ್ತವೆ.(ಏಜೆನ್ಸೀಸ್​​)