ನ್ಯೂಸ್

ಕೊರೊನಾ ಸೋಂಕಿತ ಮಹಿಳೆಗೆ ಥೈಲ್ಯಾಂಡ್ ವೈದ್ಯರು ಕೊಟ್ಟಿದ್ದು ವಿಶೇಷ ಔಷಧ; ಕೇವಲ 48ಗಂಟೆಗಳಲ್ಲೇ ಆಕೆ ಸಂಪೂರ್ಣ ವೈರಸ್​ ಮುಕ್ತ..!

ಥೈಲ್ಯಾಂಡ್​: ಕೊರೊನಾ ವೈರಸ್​ ಸೋಂಕಿತ 71 ವರ್ಷದ ಚೀನಾದ ಮಹಿಳೆಗೆ ಥೈಲ್ಯಾಂಡ್​ ವೈದ್ಯರು ಒಂದು ವಿಶೇಷ ರೀತಿಯ ಔಷಧ ಕೊಟ್ಟ ಪರಿಣಾಮ ಅವರು ಆಶ್ಚರ್ಯರೀತಿಯಲ್ಲಿ ವೈರಸ್​ನಿಂದ ಸಂಪೂರ್ಣ ಮುಕ್ತರಾಗಿದ್ದಾರೆ.

ಈ ಬಗ್ಗೆ ಥೈಲ್ಯಾಂಡ್ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ವುಹಾನ್​ನಿಂದ ಬಂದಿದ್ದ ಮಹಿಳೆಯನ್ನು ತಪಾಸಣೆಗೆ ಒಳಪಡಿಸಿದಾಗ ಕೊರೊನಾವೈರಸ್​ ಪಾಸಿಟಿವ್​ ಎಂದು ಬಂದಿತ್ತು. ಅವರನ್ನು ಆಸ್ಪತ್ರೆಯೊಂದಕ್ಕೆ ಅಡ್ಮಿಟ್ ಮಾಡಲಾಗಿತ್ತು. ಅಲ್ಲಿಯ ವೈದ್ಯರು ಆಕೆಗೆ ಮೂರು ರೀತಿಯ ಆ್ಯಂಟಿವೈರಸ್​ ಔಷಧವನ್ನು ಮಿಶ್ರಣ ಮಾಡಿ ಚಿಕಿತ್ಸೆ ನೀಡಿದ್ದಾರೆ.

ಶೀತಜ್ವರ ಬಂದಾಗ ನೀಡಲಾಗುವ ಆ್ಯಂಟಿ ವೈರಸ್​ ಒಸೆಲ್ಟಮಿವಿರ್​ (oseltamivir ) ಮತ್ತು ಎಚ್​ಐವಿ ಪಾಸಿಟಿವ್​ ಇರುವವರಿಗೆ ಚಿಕಿತ್ಸೆ ನೀಡಲು ಉಪಯೋಗಿಸುವ ಲೋಪಿನವೀರ್ (lopinavir)ಹಾಗೂ ರಿಟೋನವೀರ್​ (ritonavir) ಆ್ಯಂಟಿ ವೈರಲ್​ ಔಷಧಗಳನ್ನು ಸಂಯೋಜಿಸಿ ಕೊರೊನಾ ಸೋಂಕಿತ ಮಹಿಳೆಗೆ ಚಿಕಿತ್ಸೆ ನೀಡಲಾಗಿತ್ತು. ಅದಾದ ಬಳಿಕ ಕೇವಲ 48ಗಂಟೆಗಳಲ್ಲಿ ಅವರಲ್ಲಿ ವೈರಸ್​ ನೆಗೆಟಿವ್​ ಆಗಿತ್ತು. ಸದ್ಯ ಅವರು ದಣಿದಿದ್ದರಿಂದ ಇನ್ನು 12 ತಾಸುಗಳ ಬಳಿಕ ಎದ್ದು ಕುಳಿತುಕೊಳ್ಳಬಹುದು ಎಂದು ವೈದ್ಯ ಕ್ರಿಂಗ್​ ಸಾಕ್​ ಎಂಬುವರು ತಿಳಿಸಿದ್ದಾರೆ.

ಈ ಬಗ್ಗೆ ಸ್ಪಷ್ಟ ಸಂಶೋಧನಾ ವರದಿಗಾಗಿ ಥೈಲ್ಯಾಂಡ್​ ಆರೋಗ್ಯ ಇಲಾಖೆ ಕಾಯುತ್ತಿದೆ. ಅದಾದ ನಂತರ ಸರಿಯಾದ ಮಾಹಿತಿ ನೀಡಲಾಗುವುದು ಎಂದು ಹೇಳಿದ್ದಾರೆ.

ಥೈಲ್ಯಾಂಡ್​ನಲ್ಲಿ ಒಟ್ಟು 19 ಜನರಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ. ಅವರಲ್ಲಿ ಎಂಟು ಮಂದಿ ಈಗಾಗಲೇ ಗುಣಮುಖರಾಗಿದ್ದು ಇನ್ನು 11 ಜನರು ಆಸ್ಪತ್ರೆಯಲ್ಲಿಯೇ ಇದ್ದಾರೆ. (ಏಜೆನ್ಸೀಸ್​)