cat 
ನ್ಯೂಸ್

ವಿಡಿಯೋ: ಸಮುದ್ರದ ನಡುವೆ ಸಿಲುಕಿದ್ದ ನಾಲ್ಕು ಬೆಕ್ಕುಗಳ ರಕ್ಷಿಸಿದ ನೌಕಾ ಸೇನೆ, ರೋಚಕ ಸ್ಟೋರಿ

ಬ್ಯಾಂಕಾಕ್: ಅದೊಂದು ಹಡಗು ಸಮುದ್ರದ ನಟ್ಟ ನಡುವೆ ಮುಳುಗಿ ಹೋಗುವ ಸ್ಥಿತಿಯಲ್ಲಿ ಸಿಲುಕಿಕೊಂಡಿತ್ತು, ಆ ದೇಶದ ನೌಕಾ ರಕ್ಷಣಾ ಸಿಬ್ಬಂದಿ ಅಲ್ಲಿಗೆ ದೌಡಾಯಿಸಿ, ಮುಳುಗುತ್ತಿರುವ ಹಡಗಿನಲ್ಲಿನ ಸಿಬ್ಬಂದಿಯನ್ನು ಪಾರು ಮಾಡಿ ದಡಕ್ಕೆ ಕರೆದುಕೊಂಡು ಬಂದಿತ್ತು.

ಆದರೆ, ಆ ನೌಕಾ ಸಿಬ್ಬಂದಿಗೆ ಏನೋ ಒಂದು ಅನುಮಾನ ಬಂದಿತು. ನಾಲ್ಕು ದಿನ ಬಿಟ್ಟು ವಾಪಸ್ ಸಮುದ್ರದ ನಡುವೆ ಮುಳುಗುತ್ತಿರುವ ಹಡುಗನ್ನು ಹುಡುಕಿಕೊಂಡು ಹೋಯಿತು. ಕಾರಣ ಅಲ್ಲಿ ಏನಾದರೂ ತೈಲ ಸೋರಿಕೆಯಾಗಿದೆಯಾ ಎಂದು. ಆದರೆ ರಕ್ಷಣಾ ಸಿಬ್ಬಂದಿ ಕ್ಯಾಮೆರಾ ಜೂಮ್ ಹಾಕಿ ಹಡಗನ್ನು ನೋಡಿದಾಗ ಅಲ್ಲಿ ಕಂಡಿದ್ದೇ ಬೇರೆ!

ಹೌದು! ಈ ಘಟನೆ ನಡೆದಿದ್ದು ಕಳೆದ ವಾರ ಥಾಯ್​ಲ್ಯಾಂಡ್​ನ ದ್ವೀಪ ಕೋಹ್ ಲಿಪೆ ಎನ್ನುವ ಅಂಡಮಾನ್ ಸಮುದ್ರ ಪ್ರದೇಶದಲ್ಲಿ. ನೌಕಾ ಸಿಬ್ಬಂದಿಗೆ ಕ್ಯಾಮೆರಾ ಜೂಮ್ ಮಾಡಿ ನೋಡಿದಾಗ ಕಂಡು ಬಂದಿದ್ದು, ಪಾಪ ನಾಲ್ಕು ದಿನ ಆಹಾರವಿಲ್ಲದೇ ಅಂಗೈಯಲ್ಲಿ ಜೀವ ಹಿಡಿದುಕೊಂಡು ಹಡಗಿನ ಹಲಗೆಯೊಂದರ ಮೇಲೆ ಕುಳಿತಿದ್ದ ನಾಲ್ಕು ಸಣ್ಣ ಬೆಕ್ಕುಗಳು.

ಈ ಬೆಕ್ಕುಗಳನ್ನು ನೋಡಿದ ರಕ್ಷಣಾ ಸಿಬ್ಬಂದಿ ತಕ್ಷಣವೇ ಸಮುದ್ರಕ್ಕೆ ಇಳಿದು ಹಡಗಿನ ಬಳಿ ಹೋಗಿ ಅವುಗಳನ್ನು ಎತ್ತಿಕೊಂಡು, ತಮ್ಮ ಹೆಗಲ ಮೇಲೆ ಹಾಕಿಕೊಂಡು ನಾಲ್ಕೂ ಬೆಕ್ಕುಗಳ ಪ್ರಾಣ ಉಳಿಸಿದ್ದಾರೆ. ಬಳಿಕ ತಮ್ಮ ಕ್ಯಾಂಪ್​ಗೆ ಕರೆದೋಯ್ದು ಬೆಕ್ಕುಗಳಿಗೆ ಆಹಾರ ತಿನ್ನಿಸಿ ಖುಷಿ ಪಟ್ಟಿದ್ದಾರೆ. ನಿಜಕ್ಕೂ ಈ ವಿಷಯದಲ್ಲಿ ಥಾಯ್​ಲ್ಯಾಂಡ್ ನೌಕಾ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ. ರಾಯಿಟರ್ಸ್​ ಈ ವಿಡಿಯೋ ಹಂಚಿಕೊಂಡಿದ್ದು, ಸಾಕಷ್ಟು ವೈರಲ್ ಆಗಿದೆ.