ನ್ಯೂಸ್

ಪದವೀಧರರಿಗೂ ಟಿಇಟಿಗೆ ಅವಕಾಶ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ನಾಗೇಶ್ ಹೇಳಿಕೆ

Kolar

ಮುಳಬಾಗಿಲು: ಶಿಕ್ಷಕರ ಕೊರತೆ ಸರಿಪಡಿಸಲು ಸರ್ಕಾರದ ಮಾನದಂಡ ಮಾರ್ಪಾಡು ಮಾಡಿ ವಿವಿಧ ಪದವೀಧರರಿಗೂ ಟಿಇಟಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದ 30 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಸುಮಾರು 13 ಸಾವಿರ ಶಿಕ್ಷಕರ ಕೊರತೆಯಿದೆ, ಸಾವಿರಾರು ಅಭ್ಯರ್ಥಿಗಳು ಟಿಇಟಿ ಬರೆದಿದ್ದಾರೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಅರ್ಹತೆ ಹೊಂದಿಲ್ಲ. ಆದ್ದರಿಂದ ಇಂಗ್ಲಿಷ್, ವಿಜ್ಞಾನ, ಗಣಿತ ವಿಷಯಗಳಲ್ಲಿ ಪರಿಣಿತಿ ಹೊಂದಿರುವ ವಿವಿಧ ಪದವೀಧರರಿಗೂ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ ಎಂದರು.

ಶೇ.50 ಸರ್ಕಾರಿ ಶಾಲೆಗಳ ಕಟ್ಟಡ ಸುಸ್ಥಿತಿಯಲ್ಲಿವೆ. 7-8 ಸಾವಿರ ಶಾಲಾ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಇವುಗಳನ್ನು ಕೆಡವಿ ಹೊಸದಾಗಿ ನಿರ್ಮಿಸಬೇಕು. ಸರ್ಕಾರ ಮುಂದಿನ ಬಜೆಟ್‌ನಲ್ಲಿ ಇದಕ್ಕೆ ಒತ್ತು ನೀಡಲಿದೆ. ಕರ್ನಾಟಕ ಪಬ್ಲಿಕ್ ಶಾಲೆಗಳ ಸಂಖ್ಯೆ ಹೆಚ್ಚಿಸಲಾಗುವುದು. ಈಗ ಆರಂಭಗೊಂಡಿರುವ ಶಾಲೆಗಳನ್ನು ಅಭಿವೃದ್ಧಿಪಡಿಸಿ ಮೂಲಸೌಲಭ್ಯ ಕಲ್ಪಿಸಲಾಗುವುದು ಎಂದರು.

ಒಂದೂವರೆ ವರ್ಷದಿಂದ ಶಾಲೆಗಳು ಕೋವಿಡ್ ಸಂಕಷ್ಟ ಎದುರಿಸಿವೆ.

ಈ ಅವಧಿಯಲ್ಲಿ ಶಾಲೆಯಿಂದ ಮಕ್ಕಳು ಹೊರಗುಳಿದಿದ್ದು ಅವರನ್ನು ಮುಖ್ಯವಾಹಿನಿಗೆ ತರಲು ಶಾಲೆ ಆರಂಭಿಸಲಾಯಿತು. ಆರಂಭದಲ್ಲಿ ಹಲವಾರು ವಿರೋಧ, ಅಡೆ-ತಡೆ ಎದುರಿಸಿ ಶಾಲೆ ತೆರೆಯಲಾಯಿತು. ಕೆಲ ಶಿಕ್ಷಕರು ಪೂರ್ಣದಿನ ಕಾರ್ಯನಿರ್ವಹಿಸಿದರೂ ಲಾಕ್‌ಡೌನ್ ಸಂದರ್ಭದಲ್ಲೂ ಸಮಾಜಮುಖಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಕರೊನಾ ನಿಯಮಾನುಸಾರ ಪಾಠ ಮಾಡಿದ್ದಾರೆ. ಇವೆಲ್ಲವನ್ನು ನಾವು ಪರಿಗಣಿಸಬೇಕಾಗಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಮುಂದಿನ ಬೇಸಿಗೆ ರಜೆ ಅವಧಿಯಲ್ಲಿ ಅವರಿಗೆ ವಿಶೇಷ ತರಗತಿ ತೆರೆಯಲು ಕ್ರಮ ಕೈಗೊಳ್ಳಲು ಚಿಂತಿಸಿರುವುದಾಗಿ ಹೇಳಿದರು.

ಮೆಕಾಲೆ ಶಿಕ್ಷಣ ವ್ಯವಸ್ಥೆ ಬೇಡ: ಕೆಲವರು ನೂತನ ಶಿಕ್ಷಣ ನೀತಿ ವಿರೋಧಿಸುತ್ತಿದ್ದಾರೆ. ಸ್ವಾಮಿ ವಿವೇಕಾನಂದರು, ಮಹಾತ್ಮಗಾಂಧಿ ಸ್ವದೇಶಿ ಶಿಕ್ಷಣ ಸಿಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದರು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಎನ್‌ಇಪಿ ಜಾರಿಗೊಳಿಸಿದೆ. ಮೆಕಾಲೆ ಶಿಕ್ಷಣ ವ್ಯವಸ್ಥೆ ಮೆಚ್ಚುವವರು ಎನ್‌ಇಪಿ ವ್ಯವಸ್ಥೆ ವಿರೋಧಿಸುತ್ತಾರೆ. ರಾಜ್ಯದಲ್ಲಿ 20 ಸಾವಿರ ಶಾಲೆಗಳಲ್ಲಿ ಎನ್‌ಇಪಿ ಜಾರಿಗೆ ತರಲಾಗುವುದು ಎಂದು ಸಚಿವರು ತಿಳಿಸಿದರು.

ಮೊದಲು ಕೆಲಸ ಮಾಡಿ ಆಮೇಲೆ ಬೇಡಿಕೆ ಇಡಿ ಕೋಲಾರ: ವಿವಿಧ ಬೇಡಿಕೆ ಈಡೇರಿಸುವಂತೆ ಮುತ್ತಿಗೆ ಹಾಕಿದ ಅತಿಥಿ ಉಪನ್ಯಾಸಕರ ವಿರುದ್ಧ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹರಿಹಾಯ್ದಿದ್ದಾರೆ.ಮುಳಬಾಗಿಲಿನಲ್ಲಿ ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಬೆಂಗಳೂರಿಗೆ ತೆರಳುವಾಗ ನಗರ ಹೊರವಲಯದ ಬಂಗಾರಪೇಟೆ ಜಿಗ್‌ಜಾಗ್ ಬಳಿ ಸಚಿವರ ಕಾರು ತಡೆದ ಅತಿಥಿ ಉಪನ್ಯಾಸಕರು, ಕೆಲಸ ಕಾಯಂಗೊಳಿಸಬೇಕು, ವೇತನ ಹೆಚ್ಚಿಸಬೇಕೆಂದು ಪಟ್ಟು ಹಿಡಿದಾಗ ಸಚಿವರು ಸಿಡಿಮಿಡಿಗೊಂಡರು. ನೀವು ಹೇಳಿದ್ದನ್ನೆಲ್ಲ ಮಾಡಲು ಸಾಧ್ಯವಿಲ್ಲ, ಮೊದಲು ಕೆಲಸ ಮಾಡಿ, ಆಮೇಲೆ ಬೇಡಿಕೆ ಇಡಿ ಎಂದು ಗದರಿದರು. ಸಚಿವರ ಉತ್ತರದಿಂದ ಬೇಸತ್ತ ಶಿಕ್ಷಕರು ನಾವು ಬದುಕಿಗಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಕಷ್ಟವನ್ನು ನಿಮಗೆ ಹೇಳದೆ ಇನ್ಯಾರಿಗೆ ಹೇಳಿಕೊಳ್ಳಬೇಕು, ನಮಗೆ ನ್ಯಾಯ ಕೊಡಿ, ಶೋಷಣೆಯಿಂದ ಮುಕ್ತಗೊಳಿಸಿ ಎಂದಾಗ, ಸಿಟ್ಟಾದ ಸಚಿವರು, ಶೋಷಣೆ ಪದಕ್ಕೆ ಅರ್ಥ ಗೊತ್ತಿದೆಯೇ? ಬಾಯಿಗೆ ಬಂದಂತೆ ಮಾತನಾಡಬೇಡಿ. ಸರ್ಕಾರ ಕೆಲಸ ಮಾಡಿ ಎಂದು ನಿಮ್ಮ ಮನೆಗೆ ಬಂದು ಕರೆದಿಲ್ಲ, ಇಷ್ಟವಿದ್ರೆ ಕೆಲಸ ಮಾಡಿ ಇಲ್ಲವೆಂದರೆ ಪರೀಕ್ಷೆ ಬರೆದು ಬೇರೆ ದಾರಿ ನೋಡಿಕೊಳ್ಳಿ ಎಂದು ಸಚಿವರು ಗದರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೋಟ್ ಶಾಲೆಗೆ ಹೋಗದ ಶಿಕ್ಷಕರ ಬಗ್ಗೆ ನಿರ್ದಿಷ್ಟ ದೂರು ಬಂದರೆ ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬಯೋಮೆಟ್ರಿಕ್ ಹಾಜರಾತಿ ಈ ಹಂತದಲ್ಲಿ ಮಾಡಲು ಸಾಧ್ಯವಾಗುವುದಿಲ್ಲ. ಹಂತ-ಹಂತವಾಗಿ ಮಾಡುವ ಮೂಲಕ ಶಿಕ್ಷಣ ವ್ಯವಸ್ಥೆ ಬಲಪಡಿಸಲಾಗುವುದು. ಬಿ.ಸಿ.ನಾಗೇಶ್, ಸಚಿವ