ನ್ಯೂಸ್

ಟೆಸ್ಲಾಗೆ-ರೂ.1,996 ಕೋಟಿ ದಂಡ

ವಾಷಿಂಗ್ಟನ್: 2019ರ ಕಾರು ಅಪಘಾತಕ್ಕೆ ಎಲಾನ್ ಮಸ್ಕ್ ಅವರ ಟೆಸ್ಲಾ ಕೂಡ ಭಾಗಶಃ ಜವಾಬ್ದಾರನಾಗಿದೆ ಎಂದು ತೀರ್ಪು ನೀಡಿರುವ ಫ್ಲೋರಿಡಾದ ಮಿಯಾಮಿಯ ಫೆಡರಲ್ ನ್ಯಾಯಾಲಯ, ಆ ಕಂಪನಿಗೆ 1,996 ಕೋಟಿ ರೂ. ದಂಡ ವಿಧಿಸಿದೆ. ಈ ಅಪಘಾತದಲ್ಲಿ ಟೆಸ್ಲಾದ ಆಟೋಪೈಲಟ್ ತಂತ್ರಜ್ಞಾನ ವಿಫಲವಾಗಿದ್ದರಿಂದ ಕಂಪನಿ ಗಮನಾರ್ಹ ಹೊಣೆಗಾರಿಕೆಯನ್ನು ಹೊಂದಿದೆ ಎಂದು ನ್ಯಾಯಾಲಯ ತೀರ್ಪಿತ್ತಿದೆ.

ಈ ಘಟನೆಯಲ್ಲಿ 22 ವರ್ಷದ ನೈಬೆಲ್ ಬೆನಾವಿಡೆಸ್ ಲಿಯಾನ್ ಮೃತಪಟ್ಟು, ಆಕೆಯ ಗೆಳೆಯ ಡಿಲಾನ್ ಆಂಗುಲೋ ಗಂಭೀರವಾಗಿ ಗಾಯಗೊಂಡಿದ್ದರು. ಈ ಅಪಘಾತ ಪ್ರಕರಣದಲ್ಲಿ ಚಾಲಕ ಜಾರ್ಜ್ ಮೆಕ್​ಗೀ ಮೇಲೆ ಎಲ್ಲಾ ದೋಷವನ್ನು ಹೊರಿಸಲಾಗದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಟೆಸ್ಲಾದ ಆಟೋಪೈಲಟ್ ವ್ಯವಸ್ಥೆ ಬಗ್ಗೆ ಮಸ್ಕ್​ರ ಆತ್ಮವಿಶ್ವಾಸದ ಹೇಳಿಕೆಗಳು ಚಾಲಕರಲ್ಲಿ ತಪ್ಪು ಭರವಸೆ ಮೂಡಿಸಿವೆ ಎಂದು ವಾದಿಸಲಾಯಿತು. ಈ ತೀರ್ಪ, ಟೆಸ್ಲಾದ ಡ್ರೖೆವರ್​ಲೆಸ್ ಟ್ಯಾಕ್ಸಿ ಯೋಜನೆಗೆ ಪ್ರಮುಖ ಸವಾಲಾಗಿದ್ದು, ಸ್ವಯಂಚಾಲಿತ ವಾಹನ ತಂತ್ರಜ್ಞಾನದ ಸುರಕ್ಷತೆಯ ಬಗ್ಗೆ ಚರ್ಚೆಗೆ ನಾಂದಿ ಹಾಡಿದೆ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಟೆಸ್ಲಾ ತಿಳಿಸಿದೆ.