ನ್ಯೂಸ್

ಭಿಕ್ಷಾಟನೆ ಬಿಟ್ಟು ಕೃಷಿಗಿಳಿದ ತೃತೀಯ ಲಿಂಗಿ!

| ಕಿರಣ್ ಮಾದರಹಳ್ಳಿ ಚಾಮರಾಜನಗರ

ಲಾಕ್​ಡೌನ್ ಹೊಡೆತ ಕೊಟ್ಟು, ಜನರ ಬದುಕನ್ನು ಹಿಂಡಿ ಹಿಪ್ಪೆ ಮಾಡಿರುವ ಕರೊನಾ ಮಹಾಮಾರಿ, ಭಿಕ್ಷಾಟನೆಯಲ್ಲಿ ತೊಡಗಿದ್ದ ತೃತಿಯಲಿಂಗಿಯೊಬ್ಬರನ್ನು ಕೃಷಿಕರನ್ನಾಗಿ ಪರಿವರ್ತಿಸಿದೆ! ಮುಂಬೈ, ಬೆಂಗಳೂರಿನಲ್ಲಿ ಸುಮಾರು 30 ವರ್ಷಗಳಿಂದ ಬದುಕು ನಡೆಸುತ್ತಿದ್ದ ಚಾಮರಾಜನಗರ ತಾಲೂಕು ಯಾನಗಹಳ್ಳಿ ಗ್ರಾಮದ ತೃತಿಯಲಿಂಗಿ ದೇವಿ, ಕರೊನಾ ಲಾಡ್​ಡೌನ್ ತಂದೊಡ್ಡಿದ ಆರ್ಥಿಕ ಸಂಕಷ್ಟದಿಂದ ಪಾರಾಗಲು ಕೆಲ ತಿಂಗಳ ಹಿಂದೆ ತವರಿಗೆ ಮರಳಿದ್ದರು. ಜೀವನ ನಿರ್ವಹಣೆಗಾಗಿ ಮತ್ತೆ ಹಿಂದಿನ ವೃತ್ತಿ ಮುಂದುವರಿಸದೆ ತನ್ನ ಪಾಲಿನ 30 ಗುಂಟೆ ಜಮೀನಿನಲ್ಲಿ ವಿವಿಧ ಬೆಳೆ ಬೆಳೆಯುತ್ತಿದ್ದಾರೆ.

ದೈಹಿಕ ಮತ್ತು ಮಾನಸಿಕವಾಗಿ ಉಂಟಾದ ಬದಲಾವಣೆಗಳಿಂದ 18 ವರ್ಷದ ರಂಗನಾಯಕ, ಸಮಾಜದ ಹೀಯಾಳಿಕೆ ಮತ್ತು ಕುಟುಂಬದ ತಾತ್ಸಾರಕ್ಕೊಳಗಾದರು. ನಂತರ ಮುಂಬೈ ಸೇರಿ ರೂಪಾಂತರಗೊಂಡಿರುವ ದೇವಿ ಅವರಿಗೆ ಈಗ 51 ವರ್ಷ. ಮುಂಬೈ ಬಳಿಕ ಬೆಂಗಳೂರಿನ ವಿಜಯನಗರದಲ್ಲಿ ವಾಸವಿದ್ದ ದೇವಿಗೆ ಲಾಕ್​ಡೌನ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿ ಮನೆ ಬಾಡಿಗೆ ಕಟ್ಟಲು ಸಮಸ್ಯೆ ಉಂಟಾಯಿತು. ಹಾಗಾಗಿ ತವರೂರಾದ ಯಾನಗಹಳ್ಳಿಗೆ ಮರಳಿದ ಅವರು, ತನ್ನ ಭಾಗಕ್ಕೆ ಬಂದಿದ್ದ 30 ಗುಂಟೆ ಜಮೀನಿನಲ್ಲಿ ಟೊಮ್ಯಾಟೋ, ಮೆಣಸಿನಕಾಯಿ ಬೆಳೆಯಲಾರಂಭಿಸಿದರು. ಬೆಳೆಗಳಿಗೆ ನೀರು ಹರಿಸಲಾಗದ ಪರಿಸ್ಥಿತಿ ಎದುರಾದಾಗ ಪಕ್ಕದ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದ ಸಹೋದರ ನೆರವಾದ.

ಭಿಕ್ಷಾಟನೆ ಬಿಟ್ಟು ಕೃಷಿ ಮಾಡುತ್ತಾ ಗೌರವದ ಜೀವನ ನಡೆಸುತ್ತಿರುವ ದೇವಿಗೆ ಬೆಳೆದ ಬೆಳೆ ನಿರೀಕ್ಷೆ ಮಟ್ಟದಲ್ಲಿ ಲಾಭ ತಂದುಕೊಡದಿದ್ದರೂ ಬಿತ್ತುಣ್ಣುವ ಕಾಯಕ ನಿಲ್ಲಿಸುವ ಆಲೋಚನೆ ಈಗಿಲ್ಲ. ಒಂದು ಕಾಲದಲ್ಲಿ ತೃತೀಯ ಲಿಂಗಿ ಎಂಬ ಕಾರಣಕ್ಕೆ ಹೀಯಾಳಿಸಿದ ಜನ ಈಗ ಎಲ್ಲರೊಳಗೊಬ್ಬರಂತೆ ದೇವಿಯನ್ನು ಕಾಣುತ್ತಿದ್ದಾರೆ.

ಬದುಕಿರುವವರೆಗೂ ಬೆಂಗಳೂರಿನಲ್ಲೇ ಇದ್ದು ಬಿಡಲು ನಿರ್ಧರಿಸಿದ್ದೆ. ಕೋವಿಡ್ ಹಿನ್ನೆಲೆ ಲಾಕ್​ಡೌನ್ ಜಾರಿಗೊಳಿಸದಿದ್ದರೆ ನಾನು ಊರಿಗೆ ಮರಳುತ್ತಿರಲಿಲ್ಲ. ಈಗ ಗ್ರಾಮಕ್ಕೆ ಮರಳಿ ಜೀವನ ನಿರ್ವಹಣೆಗೆ ಕೃಷಿಯಲ್ಲಿ ತೊಡಗಿದ್ದೇನೆ. ಸರ್ಕಾರದಿಂದ ನನ್ನ ಜಮೀನಿಗೆ ಹನಿ ನೀರಾವರಿ ಸೌಲಭ್ಯ ಕಲ್ಪಿಸಿಕೊಟ್ಟರೆ ಉಪಕಾರವಾಗಲಿದೆ.

| ದೇವಿ ತೃತೀಯ ಲಿಂಗಿ ಚಾಮರಾಜನಗರ

ದೇವಿ ಅವರ ಜಮೀನಿಗೆ ಹನಿ ನೀರಾವರಿ ಸೌಲಭ್ಯ ಒದಗಿಸಿಕೊಡಲು ಕ್ರಮವಹಿಸಲಾಗುವುದು.

| ಶಿವಪ್ರಸಾದ್ ಉಪನಿರ್ದೇಶಕ ತೋಟಗಾರಿಕೆ ಇಲಾಖೆ, ಚಾಮರಾಜನಗರ