ನ್ಯೂಸ್

ಕಾಶ್ಮೀರದ ಕಥುವಾದಲ್ಲಿ ಸೇನಾ ವಾಹನಗಳ ಮೇಲೆ ಉಗ್ರರ ದಾಳಿ: ಇಬ್ಬರು ಯೋಧರಿಗೆ ಗಾಯ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಬಿಲ್ಲವರ್ ಪ್ರದೇಶದಲ್ಲಿ ಸೇನಾ ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಇಬ್ಬರು ಸೇನಾ ಸಿಬ್ಬಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ಎರಡು ದಿನಗಳಲ್ಲಿ ನಡೆದ ಎರಡನೇ ಉಗ್ರ ದಾಳಿ ಇದಾಗಿದೆ. ಆರಂಭಿಕ ದಾಳಿಯನ್ನು ವಿಫಲಗೊಳಿಸಲಾಗಿದ್ದು, ಎನ್‌ಕೌಂಟರ್ ನಡೆಯುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆ ಪಂಜಾಬ್‌ನ ಪಠಾಣ್‌ಕೋಟ್ ಜಿಲ್ಲೆಯ ಗಡಿಯನ್ನು ಹೊಂದಿದೆ.

ಮೂಲಗಳ ಪ್ರಕಾರ, ಭಯೋತ್ಪಾದಕರು ಬೆಟ್ಟದ ತುದಿಯಿಂದ ಸೇನಾ ವಾಹನದತ್ತ ಗುಂಡು ಹಾರಿಸಿದ್ದಾರೆ. ಅವರು ಸೇನಾ ವಾಹನದ ಮೇಲೆ ಗ್ರೆನೇಡ್‌ಗಳನ್ನು ಎಸೆದರು ಎಂದು ಮೂಲಗಳು ತಿಳಿಸಿವೆ. ದಾಳಿಯ ನಂತರ ಈ ಪ್ರದೇಶದಲ್ಲಿ ಬೃಹತ್ ಶೋಧ ಮತ್ತು ಕಾರ್ಡನ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಕೆಲವು ವಾರಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗಳು ಉಲ್ಬಣಗೊಂಡಿವೆ. ಜೂನ್ 11 ರಂದು, ಚತ್ತರಗಲ್ಲದ ಜಂಟಿ ಚೆಕ್ ಪೋಸ್ಟ್ ಮೇಲೆ ಭಯೋತ್ಪಾದಕರು ದಾಳಿ ವೇಳೆ ಆರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರೆ, ಜೂನ್ 12 ರಂದು ಗಂಡೋ ಪ್ರದೇಶದ ಕೋಟಾ ಮೇಲ್ಭಾಗದಲ್ಲಿ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು.

ದಾಳಿಯ ನಂತರ, ಭದ್ರತಾ ಪಡೆಗಳು ತಮ್ಮ ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಜಿಲ್ಲೆಯಲ್ಲಿ ನುಸುಳಿ ಕಾರ್ಯಾಚರಣೆ ನಡೆಸಿದ ನಾಲ್ವರು ಪಾಕಿಸ್ತಾನಿ ಭಯೋತ್ಪಾದಕರಿಗೆ ತಲಾ 5 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದರು.

ಜೂನ್ 26 ರಂದು ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದರು. ಜೂನ್ 11 ಮತ್ತು 12 ರಂದು ಗುಡ್ಡಗಾಡು ಜಿಲ್ಲೆಯಲ್ಲಿ ನಡೆದ ಅವಳಿ ಭಯೋತ್ಪಾದಕ ದಾಳಿಯ ನಂತರ ಸೇನೆ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಜೊತೆಗೆ ಪೊಲೀಸರು ನಡೆಸಿದ ತೀವ್ರ ಶೋಧ ಮತ್ತು ಕಾರ್ಡನ್ ಕಾರ್ಯಾಚರಣೆಯ ನಡುವೆ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು.