ನ್ಯೂಸ್

Operation Sindoor ವೇಳೆ ಮುರಿಡ್ಕೆಯಲ್ಲಿನ ಭಯೋತ್ಪಾದಕ ಕಚೇರಿ ನಾಶ: ಎಲ್‌ಇಟಿ ಕಮಾಂಡರ್ ಖಾಸಿಮ್ ಒಪ್ಪಿಗೆ

Operation Sindoor: ಮುರಿಡ್ಕೆಯ ಮರ್ಕಜ್ ತೈಬಾದಲ್ಲಿರುವ ಭಯೋತ್ಪಾದಕ ಗುಂಪಿನ ಪ್ರಧಾನ ಕಚೇರಿಯನ್ನು ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರ ಅಡಿಯಲ್ಲಿ ನಾಶಪಡಿಸಿವೆ ಎಂದು ಲಷ್ಕರ್-ಎ-ತೈಬಾ (ಎಲ್‌ಇಟಿ) ಕಾರ್ಯಕರ್ತನೊಬ್ಬ ಇದೀಗ ಒಪ್ಪಿಕೊಂಡಿದ್ದಾನೆ.

ಬಹಾವಲ್ಪುರ ಶಿಬಿರದೊಂದಿಗೆ ಮಸೂದ್ ಅಜರ್‌ನ ಸಂಪರ್ಕದ ಬಗ್ಗೆ ಪಾಕಿಸ್ತಾನದ ಹೇಳಿಕೆಯನ್ನು ಜೈಶ್-ಎ-ಮೊಹಮ್ಮದ್ (ಜೆಇಎಂ) ಕಮಾಂಡರ್ ಬಹಿರಂಗಪಡಿಸಿದ ಕೆಲವು ದಿನಗಳ ನಂತರ ಇದೀಗ ಮತ್ತೊಂದು ವಿಚಾರ ಬೆಳಕಿಗೆ ಬಂದಿದೆ.

ಮೇ.7ರ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ನಾಶವಾದ ಮುರಿಡ್ಕೆ ಭಯೋತ್ಪಾದಕ ಶಿಬಿರವನ್ನು 'ಹಿಂದಿಗಿಂತ ದೊಡ್ಡದಾಗಿ' ಪುನರ್ನಿರ್ಮಿಸಲಾಗುತ್ತಿದೆ ಎಂದು ಎಲ್‌ಇಟಿ ಕಮಾಂಡರ್ ಖಾಸಿಮ್ ಒಪ್ಪಿಕೊಂಡಿದ್ದಾರೆ. ಇದೀಗ ಈತನ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಮುರಿಡ್ಕೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಶೇಖುಪುರ ಜಿಲ್ಲೆಯ ಒಂದು ನಗರವಾಗಿದೆ.

"(ಭಾರತೀಯ) ದಾಳಿಯಲ್ಲಿ ನಾಶವಾದ ಮುರಿಡ್ಕೆಯಲ್ಲಿರುವ ಮರ್ಕಜ್ ತೈಬಾದ ಅವಶೇಷಗಳ ಮೇಲೆ ನಾನು ನಿಂತಿದ್ದೇನೆ. ಅದನ್ನು ಪುನರ್ನಿರ್ಮಿಸುವ ಪ್ರಕ್ರಿಯೆ ನಡೆಯುತ್ತಿದೆ. ದೇವರ ದಯೆಯಿಂದ, ಈ ಮಸೀದಿಯನ್ನು ಮೊದಲಿಗಿಂತ ದೊಡ್ಡದಾಗಿ ನಿರ್ಮಿಸಲಾಗುವುದು" ಎಂದು ನಿರ್ಮಾಣ ಹಂತದಲ್ಲಿರುವ ಸ್ಥಳದ ಮುಂದೆ ನಿಂತಿದ್ದ ಖಾಸಿಮ್ ವೀಡಿಯೊದಲ್ಲಿ ಹೇಳಿದ್ದಾರೆ.

ನಾಶವಾದ ಮರ್ಕಜ್ ತೈಬಾ ಮಸೀದಿಯಲ್ಲಿ ಅನೇಕ ಭಯೋತ್ಪಾದಕರು [ ಮುಜಾಹಿದ್ದೀನ್‌ಗಳು ಮತ್ತು ತಲಾಬಾ (ವಿದ್ಯಾರ್ಥಿಗಳು )] ತರಬೇತಿ ಪಡೆದರು ಮತ್ತು "ವಿಜಯ (ಫೈಜ್)" ಸಾಧಿಸಿದರು ಎಂದು ಖಾಸಿಮ್ ಒಪ್ಪಿಕೊಂಡರು.(ಏಜೆನ್ಸೀಸ್​)