ನ್ಯೂಸ್

ಉಗ್ರ ಮಸೂದ್ ಅಜರ್ ನಾಪತ್ತೆ! ಹೊಸ ಕ್ಯಾತೆ ತೆಗೆದ ಪಾಕ್ | ಜಾಗತಿಕ ಒತ್ತಡದಿಂದ ಪಾರಾಗಲು ತಂತ್ರ?

ಇಸ್ಲಾಮಾಬಾದ್: ಉಗ್ರ ಸಂಘಟನೆ ಜೈಷ್ ಎ ಮೊಹಮದ್ ಮುಖ್ಯಸ್ಥ ಮಸೂದ್ ಅಜರ್ ನಾಪತ್ತೆಯಾಗಿದ್ದಾನೆ ಎಂದು ಪಾಕಿಸ್ತಾನ ಹೇಳಿದೆ. ಉಗ್ರರಿಗೆ ಆರ್ಥಿಕ ನೆರವು ತಡೆಯಲು ರಚಿಸಲಾದ ಜಾಗತಿಕ ವೇದಿಕೆ ‘ಹಣಕಾಸು ಕ್ರಿಯಾ ಪಡೆ’ಯ (ಎಫ್​ಎಟಿಎಫ್) ಸಭೆಗೆ ಪಾಕಿಸ್ತಾನ ಈ ಮಾಹಿತಿ ನೀಡಿದ್ದು, ಈ ಕುರಿತು ಹಲವು ಅನುಮಾನಗಳು ಮೂಡಿವೆ. ಎಫ್​ಎಟಿಎಫ್ ಸಭೆ ಪ್ಯಾರಿಸ್​ನಲ್ಲಿ ಆರಂಭವಾಗಿದ್ದು ಶುಕ್ರವಾರ ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಚಾರ ಕೈಗೆತ್ತಿಕೊಳ್ಳಲಿದೆ.

ಅಜರ್ ನಾಪತ್ತೆಯಾಗಿರುವುದರಿಂದ ಆತನ ವಿರುದ್ಧ ಎಫ್​ಐಆರ್ ದಾಖಲಿಸಲು ಆಗಿಲ್ಲ ಎಂದು ಪಾಕಿಸ್ತಾನ ತಿಳಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಜರ್​ನನ್ನು ಭಯೋತ್ಪಾದಕ ಎಂದು ಘೋಷಿಸಿದ್ದರೂ ಆತನಿಗೆ ನೀಡಬೇಕಾದ ಜೀವನ ಭತ್ಯೆಗಾಗಿ ಪಾಕಿಸ್ತಾನ ಇನ್ನೂ ಅರ್ಜಿ ಸಲ್ಲಿಸಿಲ್ಲ. 2019ರಲ್ಲಿ ಅಜರ್ ಮೇಲೆ ನಿಷೇಧ ಹೇರಲಾಗಿತ್ತು.

ಉಗ್ರರಿಗೆ ಆರ್ಥಿಕ ನೆರವು ಒದಗಿಸುವುದನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಲು ವಿಫಲವಾಗಿರುವ ಪಾಕಿಸ್ತಾನವನ್ನು ಎಫ್​ಎಟಿಎಫ್ ‘ಬೂದು ಪಟ್ಟಿ’ಗೆ ಸೇರಿಸಿದೆ. ಬೂದು ಪಟ್ಟಿಯಿಂದ ಹೊರ ಬರಬೇಕಾದರೆ 27 ಅಂಶಗಳ ಕ್ರಿಯಾ ಯೋಜನೆಯನ್ನು ಪಾಕಿಸ್ತಾನ ಅನುಷ್ಠಾನಗೊಳಿಸಬೇಕೆಂದು ವೇದಿಕೆ ಅದಕ್ಕೆ ಸೂಚಿಸಿತ್ತು. 2020ರ ಫೆಬ್ರವರಿಯೊಳಗೆ ಪೂರ್ಣವಾಗಿ ಪಾಲಿಸುವಂತೆ ಅದು ಕಳೆದ ಅಕ್ಟೋಬರ್​ನಲ್ಲಿ ಪಾಕ್​ಗೆ ಮತ್ತೊಮ್ಮೆ ಎಚ್ಚರಿಕೆ ನೀಡಿತ್ತು.

ಭಾರತದ ಪ್ರಶ್ನೆ: ಮಸೂದ್ ಕಾಣೆಯಾಗಿದ್ದಾನೆಂದು ಪಾಕಿಸ್ತಾನ ಹೇಳಿರುವುದನ್ನು ಭಾರತ ಎಫ್​ಎಟಿಎಫ್ ಸಭೆಯಲ್ಲಿ ಪ್ರಶ್ನಿಸಲಿದೆ. ಈ ಹಿಂದೆಯೂ ಅನೇಕ ಸಭೆಗಳಲ್ಲಿ ಪಾಕ್ ಇದೇ ಸಬೂಬು ನೀಡಿರುವುದನ್ನು ಭಾರತ ಎಫ್​ಎಟಿಎಫ್ ಗಮನಕ್ಕೆ ತರಲಿದೆ. ಅಜರ್ ಪಾಕ್ ಸರ್ಕಾರದ ರಕ್ಷಣೆಯಲ್ಲೇ ಇದ್ದಾನೆಂದು ಹೇಳಲಾಗುತ್ತಿದೆ. ಸರ್ಕಾರ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆದರೆ, ಪುಲ್ವಾಮಾ ದಾಳಿಯ ಕೆಲ ವಾರಗಳ ನಂತರ ನೀಡಿದ ಸಂದರ್ಶನವೊಂದರಲ್ಲಿ, ಅಜರ್ ಪಾಕ್​ನಲ್ಲೇ ಇದ್ದು ತೀವ್ರ ಅನಾರೋಗ್ಯಪೀಡಿತನಾಗಿದ್ದಾನೆ ಎಂದು ವಿದೇಶಾಂಗ ಸಚಿವ ಷಾ ಮಹಮದ್ ಖುರೇಷಿ ಹೇಳಿದ್ದರು. ಭಾರತ ‘ಸಾಕ್ಷ್ಯ’ ಒದಗಿಸಿದರೆ ಮಾತ್ರವೇ ಆತನ ವಿರುದ್ಧ ಕ್ರಮಕೈಗೊಳ್ಳುವುದಾಗಿ ಆ ಸಂದರ್ಭದಲ್ಲಿ ಪಾಕ್ ಹೇಳಿತ್ತು.