ನ್ಯೂಸ್

ರಿಪಬ್ಲಿಕ್ ಡೇ ಮೇಲೆ ಉಗ್ರ ಕಣ್ಣು

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಗಣರಾಜ್ಯೋತ್ಸವ ವೇಳೆ ವಿಧ್ವಂಸಕ ಕೃತ್ಯವೆಸಗಲು ಉಗ್ರರು ಸಂಚು ರೂಪಿಸಿರುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಅಲರ್ಟ್ ನೀಡಿದ್ದು, ತುರ್ತು ಸಂದರ್ಭ ಹೊರತುಪಡಿಸಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ರಜೆ ಮಂಜೂರು ಮಾಡದಂತೆ ಡಿಜಿಪಿ ನೀಲಮಣಿ ಎನ್.ರಾಜು ಮೌಖಿಕವಾಗಿ ಆದೇಶಿಸಿದ್ದಾರೆ.

ಸೋಮವಾರ ಸಂಜೆ ಹಿರಿಯ ಐಪಿಎಸ್ ಅಧಿಕಾರಿಗಳ ಜತೆ ಡಿಜಿಪಿ ತುರ್ತು ಸಭೆ ನಡೆಸಿದರು. ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಹಾಗೂ ಇತರೆ ಭದ್ರತಾ ಸಿಬ್ಬಂದಿಯ ಕಾರ್ಯವೈಖರಿ ಹಾಗೂ ಬಂದೋಬಸ್ತ್ ನಿಯೋಜನೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಭದ್ರತೆಯ ಆಂತರಿಕ ವಿಷಯಗಳು ಸೋರಿಕೆಯಾಗದಂತೆ ಗೌಪ್ಯತೆ ಕಾಪಾಡಲು ಸೂಚಿಸಿದ್ದಾರೆ. ಐಷಾರಾಮಿ ಹೋಟೆಲ್, ಆಸ್ಪತ್ರೆ, ವಿವಿಧ ಧಾರ್ವಿುಕ ಕೇಂದ್ರ, ಶಾಪಿಂಗ್ ಮಾಲ್, ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಗಳ ಸುತ್ತಮುತ್ತ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿಕೊಳ್ಳಬೇಕು. ಪೂರ್ವಾಪರ ಮಾಹಿತಿ ಪಡೆದು ಹೋಟೆಲ್​ನಲ್ಲಿ ರೂಮ್ ಕೊಡುವಂತೆ ಸೂಚನೆ ನೀಡಿದ್ದಾರೆ.

ಅಕ್ರಮ ವಲಸಿಗರ ಕ್ಯಾಂಪ್ ಮೇಲೆ ಕಣ್ಣು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳನ್ನು ಗುರುತಿಸುವಂತೆ ಪೊಲೀಸ್ ಆಯುಕ್ತರು, ಜಿಲ್ಲಾ ವರಿಷ್ಠಾಧಿಕಾರಿಗಳು ಮತ್ತು ರಾಜ್ಯ ಗುಪ್ತಚರ ವಿಭಾಗ ಹಾಗೂ ಆಂತರಿಕ ಭದ್ರತಾ ದಳಕ್ಕೆ ಸೂಚಿಸಲಾಗಿದೆ. ಹೊರರಾಜ್ಯದ ನಿವಾಸಿಗಳು ಹಾಗೂ ಅಕ್ರಮ ವಲಸಿಗರು ನೆಲೆಸಿರುವ ಕ್ಯಾಂಪ್​ಗಳ ಮೇಲೆ ಕಣ್ಣಿಡಬೇಕು. ಅಗತ್ಯ ಬಿದ್ದರೆ ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಬೆಂಗ್ಳೂರು ಕಮಿಷನರ್ ಸಭೆ: ಮತ್ತೊಂದೆಡೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅಧಿಕಾರಿಗಳ ಸಭೆ ನಡೆಸಿ, ಜನಸಂದಣಿ ಪ್ರದೇಶಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ಗಮನ ಇರಿಸಬೇಕು. ಶಂಕಾಸ್ಪದ ವ್ಯಕ್ತಿಗಳ ಗುರುತಿನ ಚೀಟಿ ಪಡೆದು ವಿಚಾರಣೆ ನಡೆಸುವಂತೆ ಸೂಚನೆ ನೀಡಿದ್ದಾರೆ.

ರಾಜ್ಯದ ಕರಾವಳಿ ಭಾಗದಲ್ಲಿ ಭಯೋತ್ಪಾದಕ ಸಂಘಟನೆಗಳು ಚಟುವಟಿಕೆ ನಡೆಸುತ್ತಿರುವುದು ಕೆಲ ಘಟನೆಗಳಿಂದ ಖಚಿತವಾಗಿದೆ. ಯಾವ ಸಂಘಟನೆ ಜತೆ ಯಾರು ಶಾಮೀಲಾಗಿದ್ದಾರೆ ಎಂಬುದು ತನಿಖೆ ನಂತರ ಬೆಳಕಿಗೆ ಬರಲಿದೆ. | ಶೋಭಾ ಕರಂದ್ಲಾಜೆ ಸಂಸದೆ