ಶ್ರೀ ರಾಮೇಶ್ವರ ದೇವಸ್ಥಾನ 
ನ್ಯೂಸ್

ಶಾಸಕ ಜ್ಞಾನೇಂದ್ರ ನೇತೃತ್ವದಲ್ಲಿ ತೆಪ್ಪೋತ್ಸವ

ಶಿವಕುಮಾರ ಎಸ್.ಪಿ.

ತೀರ್ಥಹಳ್ಳಿ: ಕಳೆದ 50 ವರ್ಷಗಳಿಂದ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸೌಹಾರ್ದದಿಂದ ನಡೆದುಕೊಂಡು ಬಂದಿದ್ದ ಶ್ರೀ ರಾಮೇಶ್ವರ ದೇವರ ತೆಪ್ಪೋತ್ಸವ ಸಮಿತಿ ರಚನೆಯಲ್ಲಿ ಉಂಟಾಗಿರುವ ರಾಜಕೀಯ ಭಿನ್ನಾಭಿಪ್ರಾಯದಿಂದಾಗಿ ಈ ಬಾರಿಯ ತೆಪ್ಪೋತ್ಸವ ನಡೆಸುವ ಹೊಣೆಗಾರಿಕೆ ಶಾಸಕ ಆರಗ ಜ್ಞಾನೇಂದ್ರ ಸೇರಿ ಕಾಂಗ್ರೆಸ್ ಮುಖಂಡರ ಹೆಗಲಿಗೇರಿದೆ.

ಹೊಸವರ್ಷದ ದಿನದಂದು ನಡೆಯಬೇಕಿರುವ ತೆಪ್ಪೋತ್ಸವ ಸಮಿತಿ ರಚನೆಗಾಗಿ ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ಶನಿವಾರ ಗ್ರಾಮೀಣ ಸೌಧದಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ತೆಪ್ಪೋತ್ಸವ ಸಮಿತಿ ಸಂಚಾಲಕರ ನೇಮಕಕ್ಕೆ ಸಂಬಂಧಿಸಿ ಸಭೆಯಲ್ಲಿದ್ದ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ತಿಕ್ಕಾಟ ಆರಂಭವಾಯಿತು. ಸಮಿತಿ ರಚಿಸುವಲ್ಲಿ ಎರಡು ಬಣಗಳ ನಡುವೆ ಒಮ್ಮತ ಮೂಡಿಸಲು ವಿಲವಾದ ಕಾರಣ ಅಂತಿಮವಾಗಿ ಎರಡೂ ಪಕ್ಷಗಳ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಲಾಯಿತು.

ನಾಡಿನಲ್ಲೇ ಪ್ರಸಿದ್ಧ ಈ ಉತ್ಸವವನ್ನು ಯಥಾವತ್ತಾಗಿ ಮುಂದುವರಿಸುವ ಸಲುವಾಗಿ ಅಂತಿಮವಾಗಿ ಶಾಸಕರ ಅಧ್ಯಕ್ಷತೆ ಮತ್ತು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಆರ್.ಎಂ.ಮಂಜುನಾಥ ಗೌಡರ ಗೌರವಾಧ್ಯಕ್ಷತೆೆಯಲ್ಲಿ ಸಮಿತಿ ರಚಿಸಿ ಈ ಬಾರಿಯ ತೆಪ್ಪೋತ್ಸವ ನಡೆಸಲು ನಿರ್ಣಯಿಸಲಾಯಿತು. ಪುರಾಣ ಪ್ರಸಿದ್ಧ ಇಲ್ಲಿನ ಎಳ್ಳಮಾವಾಸ್ಯೆ ಜಾತ್ರೆಗೆ ಪೂರಕವಾಗಿ ದಶಕಗಳಿಂದ ನಡೆಯುತ್ತಿರುವ ಶ್ರೀ ರಾಮೇಶ್ವರ ದೇವರ ತೆಪ್ಪೋತ್ಸವ ವರ್ಷದಿಂದ ವರ್ಷಕ್ಕೆ ಜನಪ್ರಿಯ ಆಗುತ್ತಿದೆ.

ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರಹಮತ್‌ಉಲ್ಲಾ ಅಸಾದಿ, ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಶಚ್ಚೀಂದ್ರ ಹೆಗ್ಡೆ, ತಾಪಂ ಇಒ ಎಂ.ಶೈಲಾ, ಪಪಂ ಸಿಒ ನಾಗರಾಜ್, ಶಿರಸ್ತೇದಾರ್ ಸತ್ಯಮೂರ್ತಿ ಇದ್ದರು.