ಉಪವಾಸ ಅದ್ಭುತವಾದ ಔಷಧ ನಿಜ, ಆದರೆ ಅದನ್ನು ಇದ್ದಕ್ಕಿದ್ದಂತೆ ದೊಡ್ಡ ಪ್ರಮಾಣದಲ್ಲಿ ಅಥವಾ ಅವೈಜ್ಞಾನಿಕವಾಗಿ ಮಾಡಬಾರದು. ಉಪವಾಸ ಹೇಗಿರಬೇಕೆಂದು ಒಂದೇ ಮಾತಿನಲ್ಲಿ ಹೇಳಬೇಕೆಂದರೆ ನಮ್ಮ ದೇಹವು ಅದರಿಂದ ಸಂತೋಷ ಪಡುವಂತಿರಬೇಕು. ಹಾಗಾಗಿ ಉಪವಾಸದ ಸಂದರ್ಭದಲ್ಲಿ ಹಸಿವು ಅಥವಾ ಬಾಯಾರಿಕೆಯನ್ನು ನಾವು ತಡೆಯುವಂತೆ ಆಗಬಾರದು. ಹಾಗೇನಾದರೂ ತುಂಬಾ ಹಸಿವು ಅಥವಾ ಬಾಯಾರಿಕೆಯಾದರೆ ಆಗ ಎಳನೀರು, ಸುಲಭವಾಗಿ ಜೀರ್ಣವಾಗುವಂತಹ ಹಣ್ಣುಗಳು, ಕೆಲವು ತರಕಾರಿಗಳ ಜ್ಯೂಸ್ ಸೇವಿಸಬಹುದು. ಕೆಲವರು ಉಪವಾಸದ ಹೆಸರಿನಲ್ಲಿ ಉಪ್ಪಿಟ್ಟು, ಅವಲಕ್ಕಿ, ಬಿಸ್ಕಿಟ್, ಬ್ರೆಡ್ ಎಂದೆಲ್ಲಾ ಸೇವಿಸುತ್ತಾರೆ. ಆದರೆ ಹಾಗೆ ಸೇವಿಸುವುದು ಆರೋಗ್ಯದ ಬದಲು ಅನಾರೋಗ್ಯ ತರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಏಕೆಂದರೆ ಇವೆಲ್ಲಾ ಜೀರ್ಣಕ್ಕೆ ಭಾರವಾಗಿದ್ದು ಉಪವಾಸದ ವಿರುದ್ಧವಾದ ಕೆಲಸವನ್ನು ಮಾಡುತ್ತವೆ.
ಶ್ರಾವಣದಲ್ಲಿ ಮಳೆಯು ಪೂರ್ತಿಯಾಗಿ ಹೋಗಿರುವುದಿಲ್ಲ; ಆದರೆ ಆಗಾಗ ಬಿಸಿಲು ಬೀಳುತ್ತದೆ. ಹೀಗಾದಾಗ ಶೀತ, ಕೆಮ್ಮು, ಜ್ವರ ಮುಂತಾದ ಸಮಸ್ಯೆಗಳು ಕಾಡುತ್ತವೆ. ಏಕೆಂದರೆ ಇಂತಹ ವಾತಾವರಣದಲ್ಲಿ ಕೆಟ್ಟ ವೈರಸ್ ಮತ್ತು ಬ್ಯಾಕ್ಟೀರಿಯಾಗಳು ಸುಲಭವಾಗಿ ಹೆಚ್ಚುತ್ತವೆ ಮತ್ತು ಒಬ್ಬರಿಂದ ಒಬ್ಬರಿಗೆ ಹರಡುತ್ತವೆ. ಹಾಗಾಗಿ ನಾವು ನಿತ್ಯವೂ ಕೊತ್ತಂಬರಿ ಬೀಜ, ಜೀರಿಗೆ, ಶುಂಠಿ, ಸ್ವಲ್ಪ ಪ್ರಮಾಣದಲ್ಲಿ (ಮೂರ್ನಾಲ್ಕು ಚಿಟಿಕೆಯಷ್ಟು) ಅಮೃತ ಬಳ್ಳಿಗಳನ್ನು ಹಾಕಿ ಕುದಿಸಿದ ನೀರನ್ನು ಸೇವಿಸುವುದು ಒಳ್ಳೆಯದು. ಈ ಕಾಲದಲ್ಲಿ ಜೀರ್ಣಕ್ರಿಯೆಯ ಕೊರತೆ ಕೂಡ ಕಾಡುವ ಕಾರಣದಿಂದ ನಾವು ಆಹಾರ ಸೇವಿಸುವಾಗ ಜಾಗೃತೆ ವಹಿಸಬೇಕು. ಹಬ್ಬವೆಂದು ಕರಿದ ಪದಾರ್ಥ ಅಥವಾ ಅತಿಯಾಗಿ ಸಿಹಿ ಸೇವಿಸಬಾರದು. ಮಧ್ಯಾಹ್ನದ ಸಮಯದಲ್ಲಿ ಮಾತ್ರ ವಿಶೇಷ ತಿನಿಸುಗಳನ್ನು ಸೇವಿಸಿ ರಾತ್ರಿಯ ಊಟ ಅತ್ಯಂತ ಲಘುವಾಗಿರುವ ಹಾಗೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಅಜೀರ್ಣ, ವಾಂತಿ, ಭೇದಿ ಮುಂತಾದ ತೊಂದರೆಗಳು ಉಂಟಾಗುತ್ತವೆ.ಮಳೆ ತುಂಬಾ ಇದ್ದ ದಿನಗಳಲ್ಲಿ ಅತಿಯಾದ ಪ್ರಮಾಣದಲ್ಲಿ ಹಸಿ ತರಕಾರಿಗಳು, ಮೊಳಕೆ ಭರಿಸಿದ ಕಾಳುಗಳನ್ನು ಸೇವಿಸುವುದು ಬೇಡ. ಸ್ವಲ್ಪ ಪ್ರಮಾಣದಲ್ಲಿ ಅಥವಾ ಇವುಗಳಿಗೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಶುಂಠಿ, ಜೀರಿಗೆ, ಕಾಳು ಮೆಣಸು, ಅರಿಶಿಣದಂತಹ ಮಸಾಲೆ ಪದಾರ್ಥಗಳನ್ನು ಹಾಕಿ ಸೇವಿಸಬೇಕು. ಮಳೆ ಹೆಚ್ಚಿರುವ ದಿನಗಳಲ್ಲಿ ಶುಂಠಿ, ತುಳಸಿ, ಕಾಳುಮೆಣಸು, ಹಿಪ್ಪಲಿ ಮುಂತಾದ ಪದಾರ್ಥಗಳನ್ನು ಹಾಕಿ ಹರ್ಬಲ್ ಟೀ ಮಾಡಿಕೊಂಡು ಸೇವಿಸಬಹುದು.
ಪಿತ್ತ ಹೆಚ್ಚಾದ ಸಂದರ್ಭಗಳಲ್ಲಿ ಲಾವಂಚ, ಸೊಗದೆ ಬೇರು, ಮಜ್ಜಿಗೆ ಹುಲ್ಲು ಮುಂತಾದ ಪದಾರ್ಥಗಳಿಂದ ಹರ್ಬಲ್ ಟೀ ಮಾಡಿ ಸೇವಿಸುವುದು ಒಳ್ಳೆಯದು. ಕೆಲವರಿಗೆ ಈ ಕಾಲದಲ್ಲಿ ಮಂಡಿ, ಮೈಕೈ, ಸೊಂಟ ನೋವು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿತ್ಯವೂ ಬೆಳಿಗ್ಗೆಯ ಸಮಯದಲ್ಲಿ ಬೆಚ್ಚಗಿನ ಎಣ್ಣೆಯಿಂದ (ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯಿಂದ) ಮಸಾಜ್ ಮಾಡಿಕೊಳ್ಳುವುದು ತುಂಬಾ ಅನುಕೂಲ. ಜೊತೆಗೆ ಲಘುವಾದ ಯೋಗಾಸನಗಳು, ವಾಕಿಂಗ್, ಸ್ಟ್ರೆಚಿಂಗ್ನಂತಹ ವ್ಯಾಯಾಮಗಳನ್ನು ಬಿಡಬಾರದು. ಈ ಕಾಲದಲ್ಲಿ ನಿತ್ಯವೂ ಕನಿಷ್ಠ ಹತ್ತು ನಿಮಿಷ ಧ್ಯಾನ ಮಾಡುವುದರಿಂದ ಆರೋಗ್ಯವೃದ್ಧಿಗೆ ತುಂಬಾ ಅನುಕೂಲವಾಗುತ್ತದೆ. ನಿತ್ಯ ಕನಿಷ್ಠ ಹತ್ತು-ಹದಿನೈದು ನಿಮಿಷವನ್ನು ಧ್ಯಾನಕ್ಕೆ ಕೊಡೋಣ. ಅದರಿಂದ ಎಷ್ಟೋ ರೀತಿಯ ದೈಹಿಕ ಮಾನಸಿಕ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು. ಇನ್ನು ಮಳೆಗಾಲ ಮುಗಿಯುತ್ತಾ ಬಿಸಿಲು ಬರುತ್ತಾ ಹೋದಂತೆ ದೇಹದಲ್ಲಿ ಪಿತ್ತ ದೋಷ ಹೆಚ್ಚಾಗುತ್ತದೆ. ಹೀಗಾಗಿ ಉಷ್ಣದಿಂದ ಆಗುವ ಬಹುತೇಕ ಎಲ್ಲ ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ಅದನ್ನು ತಪ್ಪಿಸಲು ಉಪ್ಪು, ಹುಳಿ, ಖಾರಗಳ ಸೇವನೆಯನ್ನು ಸ್ವಲ್ಪ ಕಡಿಮೆ ಮಾಡಬೇಕು. ತಂಪು ಗುಣವನ್ನು ಹೊಂದಿರುವ ಎಳನೀರು, ಬೂದುಗುಂಬಳ, ಪಡವಲಕಾಯಿ, ತುಪ್ಪ, ಬೆಣ್ಣೆ ಮುಂತಾದ ಪದಾರ್ಥಗಳನ್ನು ಮಳೆ ಕಡಿಮೆಯಾಗುತ್ತಿದ್ದಂತೆ ನಿಧಾನವಾಗಿ ಹೆಚ್ಚಿಸುತ್ತಾ ಹೋಗಬೇಕು..
(ಪ್ರತಿಕ್ರಿಯಿಸಿ:vvsudina@gmail.com)