ಲೋಕಾಯುಕ್ತ ಕಚೇರಿ 
ನ್ಯೂಸ್

ಲೋಕಾ ಬಲೆಗೆ ಹತ್ತು ಆಫೀಸರ್ಸ್‌

ಬೆಂಗಳೂರು: ಬೆಂಗಳೂರು ನಗರ ಸೇರಿ ಆರು ಜಿಲ್ಲೆಗಳಲ್ಲಿ ಭ್ರಷ್ಟಾಚಾರ ಆರೋಪದಡಿ 10 ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಈ ವೇಳೆ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಸಂಪತ್ತು ಪತ್ತೆಯಾಗಿದೆ.

ಬೆಂಗಳೂರು ನಗರದ ಐದು ಅಧಿಕಾರಿಗಳು, ಬೆಂಗಳೂರು ಗ್ರಾಮಾಂತರ, ಗದಗ, ಕಲಬುರಗಿ, ರಾಯಚೂರು ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ತಲಾ ಓರ್ವ ಅಧಿಕಾರಿಯ ಕಚೇರಿ, ಮನೆ ಸೇರಿ 50 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ.

ಕೊಪ್ಪಳ ಜಿಲ್ಲೆಯ ಅಬಕಾರಿ ನಿರೀಕ್ಷಕ ರಮೇಶ್ ಬಿ. ಅಗಡಿ ಬಳಿ 2 ವೈನ್ ಶಾಪ್, 37 ಎಕರೆ ಕೃಷಿ ಭೂಮಿಯ ದಾಖಲೆ ಪತ್ರಗಳು ಪತ್ತೆಯಾದರೆ, ಕಲಬುರಗಿಯ ಮುನಿಸಿಪಲ್ ಕಾರ್ಪೋರೇಷನ್ ಅಧೀಕ್ಷಕ ಅಭಿಯಂತ ರಾಮಪ್ಪ ಪಾಂಡು ಜಾಧವ್ ಬಳಿ 36.46 ಲಕ್ಷ ರೂ. ಮೌಲ್ಯದ ಷೇರು ಬಾಂಡ್, 4 ಸೈಟ್‌ಗಳು ಬೆಳಕಿಗೆ ಬಂದಿದೆ. ಒಟ್ಟಾರೆ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ, ನಗದು, ಸೈಟ್, ಮನೆ, ವಾಹನಗಳು ಸೇರಿ 10 ಅಧಿಕಾರಿಗಳ ಮನೆ, ಕಚೇರಿಗಳಲ್ಲಿ 48.55 ಕೋಟಿ ರೂ. ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಪತ್ತೆಯಾಗಿದೆ.

ಯಾರ ಬಳಿ ಏನು ಸಿಕ್ತು?

*ಎಂ. ಲೋಕೇಶ್ ಬಾಬು, ಅಧೀಕ್ಷಕ ಇಂಜಿನಿಯರ್, ಬೆಂಗಳೂರು ಪೂರ್ವ ವೃತ್ತ, ಬೆಸ್ಕಾಂ

ಮನೆ, ಕಚೇರಿ ಸೇರಿ ಐದು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. 2 ಸೈಟ್, 3 ವಾಸದ ಮನೆ, 10.40 ಲಕ್ಷ ರೂ. ಮೌಲ್ಯದ ಕೃಷಿ ಭೂಮಿ, 3.50 ಲಕ್ಷ ರೂ. ನಗದು, 90 ಲಕ್ಷ ರೂ.ಮೌಲ್ಯದ ಚಿನ್ನಾಭರಣ, 30 ಲಕ್ಷ ರೂ.ಮೌಲ್ಯದ ವಾಹನಗಳು ಸೇರಿ 6.70 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.

*ಎಸ್.ಜಿ. ಸುರೇಶ್, ಕಂದಾಯ ನಿರೀಕ್ಷಕ, ವಸಂತಪುರ, ಉತ್ತರಹಳ್ಳಿ **ಎಆರ್‌ಒ ಕಚೇರಿ

6 ಕಡೆಗಳಲ್ಲಿ ಶೋಧ ನಡೆಸಿದಾಗ 3 ಸೈಟ್, 2 ವಾಸದ ಮನೆ, 1 ಾರ್ಮ್ ಹೌಸ್, 4.05 ಎಕರೆ ಕೃಷಿ ಭೂಮಿ, 3.53 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 18.08 ಲಕ್ಷ ರೂ. ಮೌಲ್ಯದ ವಾಹನಗಳು ಸೇರಿ 1.82 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.

*ಡಾ. ಎಂ.ಸಿ. ಸುನೀಲ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ, ಬೆಂ.ಗ್ರಾಮಾಂತರ ಜಿಲ್ಲೆ

6 ಸ್ಥಳಗಳಲ್ಲಿ ಶೋಧಿಸಿದ್ದು, 1 ಸೈಟ್, 3 ವಾಸದ ಮನೆ, 2 ಲಕ್ಷ ರೂ. ನಗದು, 30 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ, 54.50 ಲಕ್ಷ ಬೆಲೆಯ ವಾಹನಗಳು, ಬ್ಯಾಂಕ್‌ನಲ್ಲಿ 60 ಲಕ್ಷ ರೂ. ಸೇರಿ 6.63 ಕೋಟಿ ರೂ. ಆಸ್ತಿ ಬೆಳಕಿಗೆ ಬಂದಿದೆ.

*ಕೃಷ್ಣಪ್ಪ, ತೆರಿಗೆ ನಿರೀಕ್ಷಕ, ವಿದ್ಯಾರಣ್ಯಪುರ ಉಪ ವಿಭಾಗ ಬಿಬಿಎಂಪಿ

ಮನೆ, ಕಚೇರಿಗಳಲ್ಲಿ ಶೋಧ ನಡೆಸಿದಾಗ 3 ಸೈಟ್, 2 ಮನೆ, 7 ಎಕರೆ ಕೃಷಿ ಭೂಮಿ, 3.03 ಲಕ್ಷ ರೂ. ನಗದು, 22.69 ಲಕ್ಷ ರೂ. ಬೆಲೆಯ ಆಭರಣ, 3.62 ಲಕ್ಷ ರೂ. ಮೌಲ್ಯದ ವಾಹನಗಳು, 10.39 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು, ಬ್ಯಾಂಕ್‌ನಲ್ಲಿ 2.46 ಲಕ್ಷ ರೂ. ಸೇರಿ 2.21 ಕೋಟಿ ರೂ. ಮೌಲ್ಯದ ಆಸ್ತಿಯ ದಾಖಲೆಗಳು ಸಿಕ್ಕಿವೆ.

*ಕೆ. ಏಕೇಶ್ ಬಾಬು, ಉಪ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ, ಎಂಎಸ್ ಬಿಲ್ಡಿಂಗ್

ಆರು ಸ್ಥಳಗಳ ಮೇಲೆ ದಾಳಿ ನಡೆಸಿದಾಗ 3 ಸೈಟ್, 3 ಮನೆ, 2.12 ಎಕರೆ ಕೃಷಿ ಭೂಮಿ, 22.15 ಲಕ್ಷ ರೂ. ನಗದು, 14.25 ಲಕ್ಷ ರೂ. ಬೆಲೆಯ ಚಿನ್ನಾಭರಣ, 60 ಸಾವಿರ ರೂ. ಮೌಲ್ಯದ ವಾಹನ, 15 ಲಕ್ಷ ರೂ. ಬೆಲೆಯ ಗೃಹೋಪಯೋಗಿ ವಸ್ತುಗಳು ಸೇರಿ 7.92 ಕೋಟಿ ರೂ. ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಬೆಳಕಿಗೆ ಬಂದಿದೆ.

*ನಂಜುಂಡಯ್ಯ, ಡಿವೈಎಸ್‌ಪಿ (ಸಶಸ), ಚನ್ನಪಟ್ಟಣ ಪೊಲೀಸ್ ತರಬೇತಿ ಶಾಲೆ

8 ಸ್ಥಳಗಳಲ್ಲಿ 5 ಸೈಟ್ ಮತ್ತು 1 ವಾಸದ ಮನೆ ದಾಖಲೆ, 4.68 ಲಕ್ಷ ರೂ. ನಗದು, 45.47 ಲಕ್ಷ ರೂ. ಮೌಲ್ಯದ ಚಿನ್ನ, 23 ಲಕ್ಷ ರೂ. ಮೌಲ್ಯದ ವಾಹನ, 75 ಲಕ್ಷ ರೂ. ಬೆಲೆಯ ಗೃಹೋಪಯೋಗಿ ವಸ್ತು ಸೇರಿ 12.53 ಕೋಟಿ ರೂ. ಮೌಲ್ಯದ ಆಸ್ತಿ ದಾಖಲೆ ಪತ್ತೆಯಾಗಿವೆ.

*ಲಕ್ಷ್ಮಣ ಕೊನೆರಪ್ಪ ಕರ್ಣಿ, ಎಸ್‌ಡಿಎ ಪಂಚಾಯತ್ ಇಂಜಿನಿಯರಿಂಗ್ ವಿಭಾಗ ಗದಗ

5 ಸ್ಥಳಗಳಲ್ಲಿ ಪರಿಶೀಲಿಸಿದಾಗ 1 ಸೈಟ್, 1 ವಾಣಿಜ್ಯ ಮಳಿಗೆ, 3 ಮನೆ, 3.17 ಎಕರೆ ಕೃಷಿ ಭೂಮಿಯ ದಾಖಲೆ ಪತ್ರ, 3.40 ಲಕ್ಷ ರೂ. ನಗದು, 22.91 ಲಕ್ಷ ರೂ. ಮೌಲ್ಯದ ಚಿನ್ನ ಸೇರಿ 2.01 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.

*ರಾಮಪ್ಪ ಪಾಂಡು ಜಾಧವ್, ಅಧೀಕ್ಷಕ ಅಭಿಯಂತ, ಮುನಿಸಿಪಲ್ ಕಾರ್ಪೊರೇಷನ್ ಕಲಬುರಗಿ

3 ಸ್ಥಳಗಳಲ್ಲಿ 4 ಸೈಟ್, 2 ಮನೆ, 7 ಎಕರೆ ಕೃಷಿ ಭೂಮಿಯ ದಾಖಲೆ ಪತ್ರಗಳು, 1.50 ಲಕ್ಷ ರೂ. ನಗದು, 18 ಲಕ್ಷ ರೂ.ಮೌಲ್ಯದ ಆಭರಣ, 15.50 ಲಕ್ಷ ರೂ. ಬೆಲೆಯ ವಾಹನಗಳು, 50 ಲಕ್ಷ ರೂ. ಬೆಲೆಯ ಮೆಡಿಕಲ್ ಕಾಲೇಜು ಸೀಟು, 36.46 ಲಕ್ಷ ರೂ. ಬೆಲೆಯ ಷೇರು/ಬಾಂಡ್ ಸೇರಿ 3.58 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಆದಾಯಕ್ಕಿಂತ ಶೇ.140 ಹೆಚ್ಚು ಆಸ್ತಿ ಪತ್ತೆ ಮಾಡಿದ್ದಾರೆ.

*ರಮೇಶ್ ಬಿ. ಅಗಡಿ, ಅಬಕಾರಿ ನಿರೀಕ್ಷಕ, ಕೊಪ್ಪಳ ಜಿಲ್ಲೆ

ಐದು ಸ್ಥಳಗಳಲ್ಲಿ 5 ಸೈಟ್, 1 ಮನೆ, 37 ಎಕರೆ ಕೃಷಿ ಭೂಮಿ ದಾಖಲೆ ಪತ್ರಗಳು ಪತ್ತೆಯಾಗಿವೆ. 4.84 ಲಕ್ಷ ರೂ. ನಗದು, 38.60 ಲಕ್ಷ ರೂ. ಬೆಲೆಯ ಆಭರಣ, 25 ಲಕ್ಷ ರೂ. ಬೆಲೆಯ ವಾಹನಗಳು, 2 ವೈನ್ ಶಾಪ್ ಸೇರಿ 1.61 ಕೋಟಿ ರೂ. ಮೌಲ್ಯದ ಆಸ್ತಿ ಬೆಳಕಿಗೆ ಬಂದಿದೆ.

*ಎಸ್.ಸುರೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಹಿರಿಯೂರು, ಚಿತ್ರದುರ್ಗ

ನಾಲ್ಕು ಸ್ಥಳಗಳಲ್ಲಿ ಪರಿಶೀಲಿಸಿದಾಗ 3 ಸೈಟ್, 3 ವಾಸದ ಮನೆ, 9.20 ಎಕರೆ ಕೃಷಿ ಭೂಮಿಯ ದಾಖಲೆಗಳು, 4.85 ಲಕ್ಷ ರೂ. ನಗದು, 61 ಲಕ್ಷ ರೂ. ಬೆಲೆಯ ಆಭರಣ, 22.10 ಲಕ್ಷ ರೂ. ಬೆಲೆಯ ವಾಹನಗಳು, 42.83 ಲಕ್ಷ ರೂ. ಬೆಲೆಯ ಗೃಹೋಪಯೋಗಿ ವಸ್ತುಗಳು ಸೇರಿ 3.50 ಕೋಟಿ ರೂ. ಮೌಲ್ಯದ ಆಸ್ತಿ ಬೆಳಕಿಗೆ ಬಂದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.