ಶಿವಮೊಗ್ಗ ಮಂಡ್ಲಿಯ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಧರ್ಮಸಭೆಯಲ್ಲಿ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು, ಶ್ರೀ ಒಡೆಯರ್ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಅಭಿನವ ಸಿದ್ದಲಿಂಗ ಶ್ರೀಗಳು, ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಶ್ರೀ ಪಶುಪತಿ ಶಿವಾಚಾರ್ಯ ಸ್ವಾಮೀಜಿ, ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಎಚ್.ವಿ.ಮಹೇಶ್ವರಪ್ಪ, ಎಸ್.ಎಂ.ಮೇಘರಾಜ, ಎಂ.ಎಸ್.ಸುರೇಶ್, ಕೆ.ಕೆ.ದಿವಾಕರ ಇದ್ದರು. 
ನ್ಯೂಸ್

ಸಂಸ್ಕೃತಿಯ ಸಂವರ್ಧನೆಗೆ ದೇವಸ್ಥಾನಗಳು ಸ್ಫೂರ್ತಿಯ ಸೆಲೆ

ಶಿವಮೊಗ್ಗ: ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯಗಳಿಗೆ ಬಹಳಷ್ಟು ಪಾವಿತ್ರ್ಯತೆ ಕೊಟ್ಟಿದ್ದಾರೆ. ಇವು ಜಾಗೃತಿ ಉಂಟುಮಾಡುವ ಅಧ್ಯಾತ್ಮ ಕೇಂದ್ರಗಳು. ಭಾವೈಕ್ಯತೆ ಮತ್ತು ಸಂಸ್ಕೃತಿಯ ಸಂವರ್ಧನೆಗೆ ದೇವಸ್ಥಾನಗಳು ಸ್ಫೂರ್ತಿಯ ಸೆಲೆಗಳು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ನಗರದ ಮಂಡ್ಲಿಯಲ್ಲಿ ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನದ ಶಿಲಾದೇಗುಲ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ, ನಂತರ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ಆದರೆ ನೈತಿಕ ನಿಯಮಗಳು ಎಂದಿಗೂ ಶಾಶ್ವತ. ಮನುಷ್ಯನಿಗೆ ಅರಿವು-ಮರೆವು ಎರಡೂ ಇವೆ. ಅರಿವನ್ನು ಜಾಗೃತಗೊಳಿಸಲು ದೇವಸ್ಥಾನಗಳು ಅವಶ್ಯಕ ಎಂದು ಹೇಳಿದರು.

ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಅದರೊಂದಿಗೆ ಧರ್ಮಪ್ರಜ್ಞೆ, ರಾಷ್ಟ್ರಪ್ರಜ್ಞೆ ಬೆಳೆಸಿಕೊಳ್ಳಬೇಕು. ಜ್ಞಾನ ಕ್ರಿಯಾತ್ಮಕವಾದ ಧರ್ಮಪಾಲನೆಯಿಂದ ಜಗದಲ್ಲಿ ಶಾಂತಿ ನೆಲೆಸಲು ಸಾಧ್ಯವಿದೆ. ಮೂಲ ನಂಬಿಕೆಗಳನ್ನು ಮೂಢನಂಬಿಕೆ ಎಂದು ತಿಳಿಯದೆ ಅವುಗಳ ವಿಶಾಲ ಅರ್ಥ ತಿಳಿಯಲು ಪ್ರಯತ್ನ ಮಾಡಬೇಕಿದೆ ಎಂದರು.

ಶಿಲಾನ್ಯಾಸ ಸಮಾರಂಭದಲ್ಲಿ ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ದಿಂಡದಹಳ್ಳಿ ಶ್ರೀ ಪಶುಪತಿ ಶಿವಾಚಾರ್ಯ ಸ್ವಾಮೀಜಿ, ಬಿಳಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಳಲಿ ಮಠದ ಶ್ರೀ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಶ್ರೀ ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಂಡಿದ್ದರು.

ಸಮಿತಿ ಅಧ್ಯಕ್ಷ ಎಸ್.ಎಂ.ಮೇಘರಾಜ, ಗೌರವಾಧ್ಯಕ್ಷ ಎಚ್.ವಿ.ಮಹೇಶ್ವರಪ್ಪ, ಉಪಾಧ್ಯಕ್ಷ ಎಂ.ಎಸ್.ಸುರೇಶ್, ಪ್ರಧಾನ ಕಾರ್ಯದರ್ಶಿ ಕೆ.ಕೆ.ದಿವಾಕರ, ಖಜಾಂಚಿ ಎಂ.ಜಿ.ಗಿರೀಶ್, ಪ್ರಮುಖರಾದ ಆರ್.ಉಮಾಕಾಂತ, ಎಲ್.ಎಂ.ಮೋಹನಕುಮಾರ್, ಗಂಗಾಧರ, ರೇಣುಕಪ್ಪ, ಶಾಂತಾ ಆನಂದ, ಶಂಕರನಾಯ್ಕ, ರಾಜಕೀಯ ಪ್ರಮುಖರು ಮತ್ತು ದಾನಿಗಳು ಉಪಸ್ಥಿತರಿದ್ದರು.

ಸ್ವಾಮಿಯ ಪವಾಡ ಅನಂತ

ಶ್ರೀ ವೀರಭದ್ರೇಶ್ವರ ಸ್ವಾಮಿಯ ಪವಾಡಗಳು ಅನಂತ ಎಂದು ಹೊನ್ನಾಳಿ ಹಿರೇಕಲ್ಮಠದ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು. ಎಲ್ಲೆಡೆ ನೆಲೆಸಿರುವ ಶ್ರೀ ವೀರಭದ್ರೇಶ್ವರಸ್ವಾಮಿ ವೀರಶೈವರ ಆರಾಧ್ಯ ದೇವನಾಗಿ ಶ್ರೀ ರಂಭಾಪುರಿ ಪೀಠದ ಕ್ಷೇತ್ರನಾಥನಾಗಿ ಪೂಜೆಗೊಳ್ಳುತ್ತಿದ್ದಾನೆ. ಇಂದು ಶಿಲಾನ್ಯಾಸಗೊಂಡ ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನ ಆದಷ್ಟು ಬೇಗ ಉದ್ಘಾಟನೆಯಾಗಲೆಂದು ಆಶಿಸಿದರು.