ಹಿಂಗಾರು ಹಂಗಾಮು ಆರಂಭಗೊಂಡು ರಾಜ್ಯದ ಹಲವೆಡೆ ಮಳೆ ಆಗುತ್ತಿರುವ ನಡುವೆಯೇ ಉಷ್ಣಾಂಶ ದಿಢೀರ್ ಏರಿಕೆ (Temperature Rises In Karnataka) ಕಂಡಿರುವುದು ಜನರನ್ನ ಹೈರಾಣಾಗಿಸಿದೆ. ರಾಜ್ಯದಲ್ಲಿ ಸರಾಸರಿ ತಾಪಮಾನಕ್ಕಿಂತ 3-4 ಡಿಗ್ರಿ ಸೆಲ್ಸಿಯಸ್ವರೆಗೆ ಉಷ್ಣತೆ ಹೆಚ್ಚಾಗಿರುವುದರಿಂದ ಸೆಖೆ ಕೂಡ ಹೆಚ್ಚಾಗಿದೆ. ಕಳೆದ ಐದು ವರ್ಷದ ಅವಧಿಯಲ್ಲಿನ ತಾಪಮಾನವನ್ನು ತಾಳೆ ಹಾಕಿ ನೋಡಿದಾಗ ಈ ವರ್ಷದ ಅಕ್ಟೋಬರ್ನಲ್ಲಿ ಹೆಚ್ಚಿನ ಜಿಲ್ಲೆಗಳಲ್ಲಿ ಬಿಸಿಲಿನ ಪ್ರಮಾಣ ಏರಿಕೆಯಾಗಿದೆ. ಆದರೆ, ಮಳೆ-ಬಿಸಿಲಿನಾಟದಲ್ಲಿ ಹೆಚ್ಚಿದ ತಾಪಮಾನವೇ ಗೆದ್ದು ಬೀಗುತ್ತಿದೆ. ಇದರಿಂದಾಗಿ ಬೆಳೆದು ನಿಂತಿರುವ ವಿವಿಧ ಬೆಳೆಗಳ ಬೆಳವಣಿಗೆಗೆ ನೀರಿನ ಕೊರತೆ ಕಾಡಲಾರಂಭಿಸಿದೆ.
ಕಳೆದ ನಾಲ್ಕು ದಿನಗಳಿಂದ ಬೆಂಗಳೂರು, ಉಡುಪಿ, ಕೊಪ್ಪಳ, ವಿಜಯನಗರ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ತುಸು ಬಿಸಿಲಿನ ಝುಳ ಕಡಿಮೆಯಾಗಿದೆ. ಆದರೆ, ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದಲ್ಲಿ ಕಂಡುಬರುತ್ತಿರುವ ಹೆಚ್ಚಿನ ಬಿಸಿಲು ಜನರನ್ನು ಕಂಗೆಡಿಸಿದೆ. ಬೆಳಗಾವಿ, ಬಾಗಲಕೋಟೆ, ಧಾರವಾಡ, ಹಾವೇರಿ ಹಾಗೂ ಉತ್ತರ ಕನ್ನಡ ಭಾಗದಲ್ಲಿ ಸರಾಸರಿ ತಾಪಮಾನದಲ್ಲಿ 3-4 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಿದೆ.
ಬಾಗಲಕೋಟೆ, ಬೆಳಗಾವಿ, ಬೀದರ್ ಧಾರವಾಡ, ಗದಗ, ಕೊಪ್ಪಳ, ಹಾವೇರಿ, ಹಾಸನ, ಕಲಬುರಗಿ, ಉತ್ತರ ಕನ್ನಡ, ಕೊಡಗು, ಮಂಗಳೂರು, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಅಕ್ಟೋಬರ್ನಲ್ಲಿ 30 ಡಿಗ್ರಿ ಸೆ.ಗಿಂತ ಹೆಚ್ಚು ತಾಪಮಾನ ದಾಖಲಾಗಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದ್ದರೂ, ಹಾಸನ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಮಾತ್ರ ಬಿಸಿಲು ಹೆಚ್ಚಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ 29 ಡಿ. ಸೆ. ದಾಖಲಾಗಿದ್ದು, ಮಳೆಯ ಜತೆಗೆ ಬಿಸಿಲಿನ ತಾಪ ಕಂಡುಬಂದಿದೆ.
ಸದ್ಯ ಹಿಂಗಾರು ಬಿತ್ತನೆ ಎಲ್ಲೆಡೆ ಆರಂಭವಾಗಿದ್ದು, ರೈತರು ಕಡಲೆ, ಗೋಧಿ, ಕುಸುಬಿ ಹಾಗೂ ಜೋಳ ಬಿತ್ತನೆ ಮಾಡಿದ್ದಾರೆ. ಹಿಂಗಾರು ಬೆಳೆಗಳು ಭೂಮಿಯ ತೇವಾಂಶ ಹಾಗೂ ಇಬ್ಬನಿಯ ಮೇಲೆ ಅವಲಂಬಿತವಾಗಿದ್ದು, ತಾಪಮಾನ ಕಡಿಮೆಯಾಗಿ ಒಂದೆರಡು ಮಳೆ ಸುರಿದು ಭೂಮಿಯ ತೇವಾಂಶ ಹೆಚ್ಚಳವಾದರೆ ಬೆಳೆಗಳಿಗೆ ಅನುಕೂಲ ಎನ್ನುತ್ತಾರೆ ರೈತರು.
ಸೆಪ್ಟೆಂಬರ್ನಲ್ಲಿ ಮಳೆ ಕೊರತೆಯಾಗಿತ್ತು. ಇದರಿಂದಾಗಿ ಮಣ್ಣಿನ ತೇವಾಂಶ ಕುಸಿದು ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ. ರಾಜ್ಯದ ಮೂರ್ನಾಲ್ಕು ಜಿಲ್ಲೆಗಳಲ್ಲಿ ಎರಡು ದಿನದಿಂದ ಉತ್ತಮ ಮಳೆ ಸುರಿಯುತ್ತಿದೆ. | ಸಿ.ಎಸ್. ಪಾಟೀಲ, ಹವಾಮಾನ ಇಲಾಖೆ ನಿರ್ದೇಶಕ (ಬೆಂಗಳೂರು ಕೇಂದ್ರ) ಎಲ್ನಿನೋ ಈಗ ತಟಸ್ಥದಲ್ಲಿದೆ. ಈಗಾಗಲೇ ಲಾನಿನಾ ಆರಂಭವಾಗಬೇಕಾಗಿತ್ತು. ಆದರೆ, ಹವಾಮಾನಕ್ಕೆ ಅನುಗುಣವಾಗಿ ಮಳೆ ಈ ವರ್ಷ ಸುರಿಯಲಿಲ್ಲ. ಅಕ್ಟೋಬರ್ನಲ್ಲಿ ತಾಪಮಾನ ಏರಿಕೆಯಾಗಿದೆ. | ಡಾ. ರವಿ ಪಾಟೀಲ, ಕೃಷಿ ಹವಾಮಾನ ತಜ್ಞ, ಕೃಷಿ ವಿವಿ ಧಾರವಾಡ https://www.vijayavani.net/men-wear-saree-like-women https://www.vijayavani.net/bigg-boss-08-tamil-contestant