ನವದೆಹಲಿ: ಉತ್ತರ ಭಾರತದಲ್ಲಿ ಬಿಸಿಗಾಳಿಯ ಆರ್ಭಟ ತಾರಕಕ್ಕೇರಿದ್ದು ತಾಪಮಾನ ಏರಿಕೆ ದಿನದಿಂದ ದಿನಕ್ಕೆ ಹೊಸ ದಾಖಲೆ ಬರೆಯುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ 47.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು 18 ವರ್ಷದ ಇತಿಹಾಸದಲ್ಲಿ ಮೇ ತಿಂಗಳಲ್ಲಿ ದಾಖಲಾದ ಗರಿಷ್ಠ ತಾಪಮಾನವಾಗಿದೆ.
ಕರೊನಾ ವೈರಸ್ನಿಂದಾಗಿ ತತ್ತರಿಸಿರುವ ಭಾರತದಲ್ಲಿ ಇದೀಗ ಬಿಸಿಗಾಳಿಯ ಆಟ ಆರಂಭವಾಗಿದೆ. ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ದೈನಂದಿನ ತಾಪಮಾನ 45 ಡಿಗ್ರಿ ಸೆಲ್ಸಿಯಸ್ಗಿಂತಲೂ ಹೆಚ್ಚುತ್ತಿದೆ. ದೆಹಲಿಯಲ್ಲಿ ಮಂಗಳವಾರ ಅತಿ ಹೆಚ್ಚು 47.6 ಡಿಗ್ರಿ ಸೆ. ತಾಪಮಾನ ವರದಿಯಾಗಿದೆ. ರಾಜಸ್ಥಾನದ ಬಿಸಿಲ ಪ್ರದೇಶ ಛುರುವಿನಲ್ಲಿ ಮಂಗಳವಾರ ತಾಪಮಾನ 50 ಡಿಗ್ರಿ ಸೆಲ್ಸಿಯಸ್ನಷ್ಟಿತ್ತು. ಉಳಿದಂತೆ ದಕ್ಷಿಣ ಹರಿಯಾಣದಲ್ಲಿ 48, ದಕ್ಷಿಣ ಉತ್ತರ ಪ್ರದೇಶದಲ್ಲಿ 48 ಡಿಗ್ರಿ ಸೆಲ್ಸಿಯಸ್ ತಾಪಮಾನ ವರದಿಯಾಗಿದೆ. ಜನರು ಮನೆಯಿಂದ ಹೊರಬರುವುದಕ್ಕೂ ಸಾಧ್ಯವಾಗದೆ ತೀವ್ರ ಸಮಸ್ಯೆ ಎದುರಿಸುವಂತಾಯಿತು.
ಈ ಎಲ್ಲ ರಾಜ್ಯಗಳಲ್ಲೂ ಸಾಮಾನ್ಯಕ್ಕಿಂತ 6-7 ಡಿಗ್ರಿ ಸೆಲ್ಸಿಯಸ್ ಹೆಚ್ಚಿನ ತಾಪಮಾನ ಕಂಡುಬಂದಿದೆ. ಬಿಸಿ ಗಾಳಿ ಬೀಸಿರುವ ಪ್ರದೇಶಗಳಲ್ಲಿ ನೀರಿನ ಕೊರತೆಯೂ ಉಂಟಾಗಿದೆ. ಮುಂದಿನ ನಾಲ್ಕು ದಿನಗಳ ಕಾಲ ಬಿಸಿಗಾಳಿ ಇದೇ ರೀತಿಯಲ್ಲಿ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಮೇ 28ರಂದು ಅತಿ ಹೆಚ್ಚು ತಾಪಮಾನ ವರದಿಯಾಗುವ ಸಾಧ್ಯತೆಯಿದೆ. ಮೇ 29ರ ನಂತರ ಕೊಂಚ ಮಟ್ಟದಲ್ಲಿ ಕಡಿಮೆಯಾಗಲಿದೆ. ಈ ಸಮಯದಲ್ಲಿ ಎಚ್ಚರಿಕೆಯಿಂದಿರುವಂತೆ ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶ, ಪಂಜಾನ್, ಒಡಿಶಾ ಮತ್ತು ತೆಲಂಗಾಣಕ್ಕೆ ಎಚ್ಚರಿಸಲಾಗಿದೆ ಎಂದು ಐಎಂಡಿ ತಿಳಿಸಿದೆ.
3,000ಕ್ಕೂ ಹೆಚ್ಚು ಸಾವು
2015ರಿಂದ ಈವರೆಗೆ ದೇಶದಲ್ಲಿ 3,500ಕ್ಕೂ ಹೆಚ್ಚು ಜನ ಬಿಸಿ ಗಾಳಿಯಿಂದ ಮೃತ ಪಟ್ಟಿದ್ದಾರೆ. 2015ರಲ್ಲಿ ಭಾರೀ ಪ್ರಮಾಣದಲ್ಲಿ ಬಿಸಿ ಗಾಳಿ ಬೀಸಿದ್ದು, 2,500ಕ್ಕೂ ಹೆಚ್ಚು ಜನರು ಒಂದೇ ವರ್ಷದಲ್ಲಿ ಸಾವನ್ನಪ್ಪಿದ್ದರು. ಆಂಧ್ರ ಪ್ರದೇಶದಲ್ಲಿಯೇ 1,735 ಸಾವು ವರದಿಯಾಗಿತ್ತು.
ಉ.ಕರ್ನಾಟಕ ತತ್ತರ
ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮಳೆ ಆರ್ಭಟಿಸುತ್ತಿದ್ದರೆ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮಾತ್ರ ಬಿಸಿಲ ಝುಳ ಮುಂದುವರಿದಿದೆ. ಕಲಬುರಗಿ, ವಿಜಯಪುರ, ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಾಗಿದೆ.
ಮಳೆಗೆ ತತ್ತರಿಸಿದ ಬೆಂಗಳೂರು
ಬೆಂಗಳೂರು: ಮಂಗಳವಾರ ರಾಜಧಾನಿಯಲ್ಲಿ ಇಬ್ಬರನ್ನು ಬಲಿಪಡೆದಿದ್ದ ಮಳೆ ಬುಧವಾರವೂ ಆರ್ಭಟಿಸಿತು. ಮಧ್ಯಾಹ್ನವೇ ಶುರುವಾದ ಮಳೆಯಿಂದಾಗಿ 30ಕ್ಕೂ ಹೆಚ್ಚು ಮರಗಳು ಬಿದ್ದಿದ್ದು, ಆಟೋ, ಕಾರುಗಳು ಸೇರಿ ಹಲವು ವಾಹನಗಳು ಜಖಂಗೊಂಡಿವೆ.
ಇನ್ನೂ ನಾಲ್ಕು ದಿನ ಮಳೆ
ಬೆಂಗಳೂರು: ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದ ಹಲವೆಡೆ ಎಡೆಬಿಡದೆ ಸುರಿಯುತ್ತಿರುವ ಮಳೆ ಜೂ.1ರವರೆಗೆ ಮುಂದುವರಿಯುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಮತ್ತೊಂದೆಡೆ ಮಂಗಳವಾರ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನ ಕರಡಿಹಳ್ಳಿಯ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರೊಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ.
ದಕ್ಷಿಣ ಒಳನಾಡಿನ ಬೆಂಗಳೂರು, ಬೆಂ.ಗ್ರಾ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಮತ್ತು ತುಮಕೂರಿನಲ್ಲಿ ಮೇ 29ರಿಂದ ಜೂ.1ರವರೆಗೆ, ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಹಾಗೂ ಕಲುಬುರಗಿಯಲ್ಲಿ ಮೇ 31ರಿಂದ ಜೂ.1ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಅವಧಿಯಲ್ಲಿ 64.5 ಮಿ.ಮೀ. ಯಿಂದ 115.5 ಮಿ.ಮೀವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಬುಧವಾರ ಮಂಡ್ಯದಲ್ಲಿ 59.9 ಮಿ.ಮೀ, ಹಾಸನದಲ್ಲಿ 45.5 ಮಿ.ಮೀ, ಬೆಂಗಳೂರಿನಲ್ಲಿ 31.4 ಮಿ.ಮೀ, ಚಾಮರಾಜನಗರದಲ್ಲಿ 34.8 ಮಿ.ಮೀ, ಗದಗದಲ್ಲಿ 28.9 ಮಿ.ಮೀ, ರಾಮನಗರದಲ್ಲಿ 20.8 ಮಿ.ಮೀ, ಕೋಲಾರದಲ್ಲಿ 20.7 ಮಿ.ಮೀ, ಬೆಳಗಾವಿಯಲ್ಲಿ 17.7 ಮಿ.ಮೀ, ಬೆಂ.ಗ್ರಾದಲ್ಲಿ 16.6 ಮಿ.ಮೀ ಹಾಗೂ ದಕ್ಷಿಣ ಕನ್ನಡದಲ್ಲಿ 15.9 ಮಿ.ಮೀ ಮಳೆಯಾದರೆ, ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ.
ಸಿಡಿಲು ಬಡಿದು ರೈತ ಸಾವು: ಮೊಳಕಾಲ್ಮೂರು: ತಾಲೂಕಿನ ಕರಡಿಹಳ್ಳಿ ಗ್ರಾಮದ ರೈತ ಗುರುಬಸವರಾಜ್ (45) ಎಂಬಾತ ಮಂಗಳವಾರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಕೃಷಿ ಕಾರ್ಯಕ್ಕೆ ಸಂಜೆ ತೆರಳಿದ್ದ ಸಂದರ್ಭ ಸಿಡಿಲು ಬಡಿದಿದೆ. ರಾತ್ರಿ ವರೆಗೂ ರೈತ ಮನೆಗೆ ಬರದಿದ್ದರಿಂದ ಆತಂಕಗೊಂಡ ಕುಟುಂಬದ ಸದಸ್ಯರು ಜಮೀನಿಗೆ ತೆರಳಿ ನೋಡಿದಾಗ ವಿಷಯ ಗೊತ್ತಾಗಿದೆ.
ಧಾರಾಕಾರ ಮಳೆ: ಮೈಸೂರು ನಗರ ಸೇರಿ ಜಿಲ್ಲೆಯ ವಿವಿಧೆಡೆ ಬುಧವಾರ ಮಳೆಯಾಗಿದೆ. ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಗುಡುಗು ಸಹಿತ ಮಳೆ ಸುರಿಯಿತು. ಮಂಡ್ಯ ನಗರ, ಬಸರಾಳು, ಕೆ.ಆರ್.ಪೇಟೆ, ಪಾಂಡವಪುರ, ಮೇಲುಕೋಟೆ, ಶ್ರೀರಂಗಪಟ್ಟಣ ಭಾಗದಲ್ಲಿ ಮಳೆ ಬಿದ್ದಿದೆ.