ನ್ಯೂಸ್

23 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಕುಸಿತ

ಮೋಹನ್​ ಶೆಟ್ಟಿ

ಬೆಂಗಳೂರು: ರಾಜ್ಯದ 6 ಜಿಲ್ಲೆಗಳಲ್ಲಿ ಮುಂದಿನ 3 ದಿನ ತೀವ್ರ ಶೀತಗಾಳಿ (ಕೋಲ್ಡ್​ವೇವ್) ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಬೀದರ್, ಕಲಬುರಗಿ, ವಿಜಯಪುರದಲ್ಲಿ ಡಿ.18 ಮತ್ತು ಡಿ.19ರಂದು ಕನಿಷ್ಠ ತಾಪಮಾನ 6ರಿಂದ 8 ಡಿ.ಸೆ. ದಾಖಲಾಗಲಿದೆ. ಅಲ್ಲದೆ, ಬಾಗಲಕೋಟೆ, ರಾಯಚೂರು, ಯಾದಗಿರಿಯಲ್ಲಿ ಮುಂದಿನ 2 ದಿನ ಮತ್ತಷ್ಟು ಥಂಡಿ ವಾತಾವರಣ ಉಂಟಾಗುವ ಸಂಭವ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ 10 ಡಿ. ಸೆ.ಉಷ್ಣಾಂಶ ಇರಲಿದೆ. ಇದು ವಾಡಿಕೆಗಿಂತ 4-5 ಡಿ.ಸೆ.ಉಷ್ಣಾಂಶ ಕಡಿಮೆ ಇರಲಿದೆ. ರಾಜ್ಯದ 23 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ 3ರಿಂದ 5 ಡಿ.ಸೆ.ಉಷ್ಣಾಂಶ ಕುಸಿತವಾಗಿದೆ. ಇದರಿಂದಾಗಿ ಮೈ ನಡುಗುವ ಚಳಿ ಕಾಣಿಸಿಕೊಂಡಿದೆ. ಡಿ.20ರಿಂದ ಕನಿಷ್ಠ ತಾಪಮಾನದಲ್ಲಿ ಇಳಿಕೆಯಾಗಿದ್ದ ಉಷ್ಣಾಂಶ ಹೆಚ್ಚಳವಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ದಕ್ಷಿಣ ಕರ್ನಾಟಕದ ಭಾಗದ ಜಿಲ್ಲೆಗಳಿಗಿಂತ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಗಣನೀಯವಾಗಿ ಉಷ್ಣಾಂಶ ಕುಸಿದಿದೆ. ಇದು ವಾಡಿಕೆಗಿಂತ 5-6 ಡಿ.ಸೆ.ಕಡಿಮೆ ದಾಖಲಾಗುತ್ತಿದೆ. ಆದ್ದರಿಂದ, ಆ ಭಾಗಗಳಲ್ಲಿ ತೀವ್ರ ಚಳಿ ಕಾಣಿಸಿಕೊಂಡಿದೆ. | ಸಿ.ಎಸ್. ಪಾಟೀಲ್ ಹವಾಮಾನ ಇಲಾಖೆ ನಿರ್ದೇಶಕ

ಚಳಿಗೆ ಗುಮ್ಮಟನಗರಿ ಗಡಗಡ

ವಿಜಯಪುರ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 8 ಡಿಗ್ರಿ ಸೆಲ್ಸಿಯಸ್​ಗೆ ಕುಸಿದಿದೆ. ಪ್ರಸಕ್ತ ಸಾಲಿನಲ್ಲಿಯೇ ಅತ್ಯಂತ ಕಡಿಮೆ ತಾಪಮಾನ ಮಂಗಳವಾರ ದಾಖಲಾಗಿದ್ದು, ಇನ್ನು ಮೂರು ದಿನಗಳಲ್ಲಿ ತಾಪಮಾನ ಕನಿಷ್ಠ 7ಡಿಗ್ರಿ ಸೆಲ್ಸಿಯಸ್​ಗೆ ಕುಸಿಯುವ ಅಂದಾಜಿದೆ. ಏತನ್ಮಧ್ಯೆ ಬಂಗಾಳ ಕೊಲ್ಲಿಯಲ್ಲಿ ಚಂಡುಮಾರುತ ಬೀಸಿದ್ದೇ ಆದಲ್ಲಿ ತಾಪಮಾನದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

2009ರಲ್ಲಿ 5.5ಕ್ಕೆ ಕುಸಿತ: ಈ ಹಿಂದೆ 2009ರಲ್ಲಿ ಕನಿಷ್ಠ ತಾಪಮಾನ 5.5ಡಿ.ಸೆ.ಗೆ ಕುಸಿದಿತ್ತು. ಆ ಸಂದರ್ಭದಲ್ಲಿ ಪ್ರವಾಹ ಉಂಟಾಗಿತ್ತು. ಬಳಿಕ 2013ರಲ್ಲಿ ಕನಿಷ್ಠ ತಾಪಮಾನ 6.5 ಡಿ.ಸೆ. ದಾಖಲಾಗಿತ್ತು. 2023ರಲ್ಲಿ ಕನಿಷ್ಠ ತಾಪಮಾನ 6.5 ಡಿ.ಸೆ.ಗೆ ಕುಸಿದಿತ್ತು. ಪ್ರಸಕ್ತ ಸಾಲಿನಲ್ಲಿ ಮಂಗಳವಾರ 8 ಡಿ.ಸೆ. ದಾಖಲಾಗಿದ್ದು, ಇನ್ನೂ ಕುಸಿಯುವ ಸಾಧ್ಯತೆ ಇದೆ.