ಹೈದರಾಬಾದ್: ಡಿಸೆಂಬರ್ 04ರಂದು ಹೈದರಾಬಾದಿನ ಸಂಧ್ಯಾ ಚಿತ್ರಮಂದಿರದಲ್ಲಿ ಸಂಭವಿಸಿದ್ದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ (Allu Arjun) ಹಾಗೂ ತೆಲಂಗಾಣ ಸಿಎಂ ರೇವಂತ್ ರೆಡ್ಡಿ (Revanth Reddy) ನಡುವಿನ ಮುಸುಕಿನ ಗುದ್ದಾಟ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಟಾಲಿವುಡ್ನ ನಟರು, ನಿರ್ದೇಶಕರು, ನಿರ್ಮಾಪಕರು, ವಿತರಕರು ಸಿಎಂರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಇನ್ನೂ ಘಟನೆ ನಡೆದು ತಿಂಗಳಾಗುತ್ತ ಬಂದರು ಅಲ್ಲು ಅರ್ಜುನ್ (Allu Arjun) ವಿರುದ್ಧ ಸೆಲೆಬ್ರಿಟಿಗಳು ವಾಗ್ದಾಳಿ ಮುಂದುವರೆಸುತ್ತಿದ್ಧಾರೆ. ಇದೀಗ ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ, ನಿರ್ದೇಶಕ ತಮ್ಮಾರೆಡ್ಡಿ ಭಾರಧ್ವಾಜ್ ಅಲ್ಲು ಅರ್ಜುನ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಒಬ್ಬ ವ್ಯಕ್ತಿಯ ಅಹಂಕಾರದಿಂದಾಗಿ ಇಂದು ಟಾಲಿವುಡ್, ಸಿಎಂ ರೇವಂತ್ ರೆಡ್ಡಿ ಮುಂದೆ ಕೈಮುಗಿದು ನಿಲ್ಲುವಂತಾಗಿದೆ ಎಂದು ಕಿಡಿಕಾರಿದ್ದಾರೆ.
ಈ ಸಂಬಂಧ ವಿಡಿಯೋ ಪೋಸ್ಟ್ ಮಾಡಿರುವ ತಮ್ಮಾರೆಡ್ಡಿ, ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮಾಡಿದ ಒಂದು ತಪ್ಪಿನಿಂದಾಗಿ ಇಂದು ಇಡೀ ಟಾಲಿವುಡ್ ಸಿಎಂ ರೇವಂತ್ ರೆಡ್ಡಿ ಅವರ ಮುಂದೆ ಕೈಕಟ್ಟಿಕೊಂಡು ನಿಂತಿದೆ. ಒಬ್ಬ ಸ್ಟಾರ್ ನಟನಿಗೆ ಇರಬೇಕಾದ ಗುಣಲಕ್ಷಣ ಅಲ್ಲು ಅರ್ಜುನ್ರಲ್ಲಿ ಇಲ್ಲ. ಸಿಂಗಲ್ಸ್ಕ್ರೀನ್ ಥಿಯೇಟರ್ಗಳಲ್ಲಿ ಸಿನಿಮಾ ನೋಡಲು ಒಬ್ಬ ಸ್ಟಾರ್ ನಟ ತೆರಳಿದಾಗ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ ಮತ್ತು ಏನಾದರು ಅನಾಹುತವಾಗುತ್ತದೆ ಎಂಬುದು ಗೊತ್ತಿದ್ದರೂ ಅಲ್ಲು ಅರ್ಜನ್ ಅಲ್ಲಿ ಹೋಗಿ ತಪ್ಪು ಮಾಡಿದರು.
ಅಲ್ಲು ಅರ್ಜುವ್ (Allu Arjun) ಸಾರ್ವಜನಿಕವಾಗಿ ಹೇಗಿರಬೇಕು ಎಂಬುದನ್ನು ಹಿರಿಯ ಸ್ಟಾರ್ ನಟರನ್ನು ನೋಡಿ ಕಲಿಯಬೇಕಿದೆ. ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಯಾದಾಗ ಮಲ್ಟಿಫ್ಲೆಕ್ಸ್‌ಗಳಿಗೆ ಹೋಗಿ, ಔಪಚಾರಿಕವಾಗಿ ಅಭಿಮಾನಿಗಳನ್ನು ಭೇಟಿಯಾಗಿ ಬರುತ್ತಾರೆ. ಅಲ್ಲು ಕೂಡ ಹಾಗೇ ಮಾಡಬಹುದಿತ್ತು. ಈ ಘಟನೆ ನಡೆಯಬಾರದಿತ್ತು. ಹೇಗೆ ನಡೆಯಿತು ಎಂಬುದರ ಬಗ್ಗೆ ನಾವು ಪರಮಾರ್ಶಿಸಬೇಕಿದೆ ಎಂದು ಖ್ಯಾತ ನಿರ್ಮಾಪಕ, ನಿರ್ದೇಶಕ ತಮ್ಮಾರೆಡ್ಡಿ ಭಾರಧ್ವಾಜ್ ಅಲ್ಲು ಅರ್ಜುನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.