ವಿಜಯವಾಡ: ಬೆಂಗಳೂರಿನಲ್ಲಿ ನೆಲೆಸಿದ್ದ ಆಂಧ್ರ ಪ್ರದೇಶ ಮೂಲದ ಕುಟುಂಬವೊಂದು ಸೌದಿ ಅರೇಬಿಯಾದಿಂದ ಕುವೈತ್‌ಗೆ ಬರುತ್ತಿದ್ದಾಗ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ದುರಂತ ಸಾವಿಗೀಡಾಗಿದೆ.
ಅಪಘಾತದಲ್ಲಿ ಗೌಸ್ಬಾಷಾ (35), ಅವರ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು ಮೃತಪಟ್ಟಿದ್ದಾರೆ. ಇವರು ಆಂಧ್ರ ಪ್ರದೇಶದ ಅನ್ನಮೈಯಾ ಜಿಲ್ಲೆಯ ಮದನಪಲ್ಲಿ ಮೂಲದವರು. ಸೌದಿ ಅರೇಬಿಯಾದಿಂದ ಕುವೈತ್‌ಗೆ ಬರುತ್ತಿದ್ದಾಗ ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್ಗೆ ಡಿಕ್ಕಿಯಾಗಿ ದುರಂತ ಸಂಭವಿಸಿದೆ.
ಗುರುವಾರ ಈ ಘಟನೆ ನಡೆದಿದೆ ಎಂದು ಆಂಧ್ರದ ರಾಜಂಪೇಟೆಯಲ್ಲಿರುವ ಅವರ ಸಂಬಂಧಿಕರು ತಿಳಿಸಿದ್ದಾರೆ. ರಾಜಂಪೇಟೆ ಪಟ್ಟಣದ ದೊಡ್ಡ ಮಸೀದಿಯ ಮಾಜಿ ಅಧ್ಯಕ್ಷ ದಿವಂಗತ ನೂರುದ್ದೀನ್ ಎಂಬುವರು ಗೌಸ್ ಬಾಷಾ ಅವರ ಸೋದರ ಮಾವ. ಗೌಸ್ ಬಾಷಾ ಈ ಹಿಂದೆ ಹತ್ತನೇ ತರಗತಿವರೆಗೆ ಅಲ್ಲೇ ಓದಿದ್ದರು. ಬಳಿಕ ಗೌಸಬಾಷಾ ಹುಟ್ಟೂರು ಮದನಪಲ್ಲಿಗೆ ತೆರಳಿದ್ದರು. ಅಲ್ಲಿ ಕೆಲವು ವರ್ಷಗಳವರೆಗೆ ಇದ್ದು ಮದುವೆಯಾದ ಬಳಿಕ ಕುಟುಂಬ ಸಮೇತ ಬೆಂಗಳೂರಿಗೆ ಹೋಗಿ ನೆಲೆಸಿದ್ದರು.
ಮದುವೆಯ ನಂತರ ಗೌಸ್ ಬಾಷಾ ಜೀವನ ನಿರ್ವಹಣೆಗಾಗಿ ಕೆಲಸಕ್ಕೆಂದು ಬೆಂಗಳೂರಿನಿಂದ ಕುವೈಟತ್ಗೆ ತೆರಳಿ ಅಲ್ಲಿಯೇ ನೆಲೆಸಿದ್ದರು. ಕಾರಿನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗೌಸ್ ಬಾಷಾ ಅವರ ಪತ್ನಿ ಹಾಗೂ ಇಬ್ಬರು ಪುತ್ರರು ಸಾವಿಗೀಡಾಗಿದ್ದಾರೆ.
ಇನ್ನು ಗೌಸ್ ಬಾಷಾ ಸಾವಿನ ಬಗ್ಗೆ ಅನುಮಾನವಿದೆ ಎಂದು ಅವರ ಹತ್ತಿರದ ಸಂಬಂಧಿಕರು ತಿಳಿಸಿದ್ದಾರೆ. ಆದರೆ, ರಸ್ತೆ ಅಪಘಾತ ನಡೆದಿರುವುದು ನಿಜ ಎಂದಿದ್ದಾರೆ. ಸತ್ತಿದ್ದಾನೆ ಎನ್ನಲಾದ ವ್ಯಕ್ತಿಗೆ ಕರೆ ಮಾಡಿದರೆ ಆತ ಕರೆ ಸ್ವೀಕರಿಸುತ್ತಿಲ್ಲ. ಇದರೊಂದಿಗೆ ಅನುಮಾನಗಳು ವ್ಯಕ್ತವಾಗುತ್ತಿವೆ. ಆದರೆ, ಮೃತದೇಹಗಳನ್ನು ನೋಡುವವರೆಗೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಗೌಸ್ ಬಾಷಾ ಸಂಬಂಧಿಕರು ಹೇಳಿದ್ದಾರೆ. ಅಲ್ಲದೆ, ಕುವೈತ್‌ನಲ್ಲಿ ನಡೆದ ಈ ಅಪಘಾತದ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡು ವಿಚಾರಣೆ ನಡೆಸಬೇಕೆಂದು ಕೋರಿದ್ದಾರೆ. ಮೃತದೇಹಗಳನ್ನು ಕೂಡಲೇ ಆಂಧ್ರಪ್ರದೇಶಕ್ಕೆ ತರುವಂತೆ ಒತ್ತಾಯ ಮಾಡಿದ್ದಾರೆ. (ಏಜೆನ್ಸೀಸ್)