ನ್ಯೂಸ್

ರೇಣುಕಸ್ವಾಮಿ ಹತ್ಯೆ ಕೇಸ್​; ದರ್ಶನ್​ ಅಣ್ಣ ಕನಸಿನಲ್ಲೂ ತೊಂದರೆ ಕೊಡಲು ಬಯಸುವವರಲ್ಲ, ಇದನ್ನು ಒಪ್ಪಿಕೊಳ್ಳಲಾರೆ ಎಂದ ಖ್ಯಾತ ತೆಲುಗು ನಟ

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್​ ಹಾಗೂ ಸಹಚರರು ಪರಪ್ಪನ ಅಗ್ರಹಾರ ಸೇರಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ. ನಿಜಜೀವನದಲ್ಲಿ ಮಾದರಿಯಾಗಬೇಕಿದ್ದ ಸ್ಟಾರ್​ನಟನೊಬ್ಬನ ಈ ಕೃತ್ಯ ಪರ-ವಿರೋಧದ ಚರ್ಚೆಗೆ ಎಡೆ ಮಾಡಿಕೊಟ್ಟಿದ್ದು, ಈ ಬಗ್ಗೆ ತೆಲುಗಿನ ಖ್ಯಾತ ನಟ ನಾಗಶೌರ್ಯ ಪ್ರತಿಕ್ರಿಯಿಸಿದ್ದು, ಅವರು ನಟ ದರ್ಶನ್​ ಪರವಾಗಿ ಪೋಸ್ಟ್​ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಟ ನಾಗಶೌರ್ಯ, ಮೃತರ ಕುಟುಂಬದ ಬಗ್ಗೆ ಕೇಳಿದಾಗ ನನ್ನ ಹೃದಯವು ಅವರಿಗೆ ಮರುಗುತ್ತದೆ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬದವರಿಗೆ ಹೆಚ್ಚಿನ ಶಕ್ತಿ ನೀಡಲಿ ಎಂದು ನಾನು ಬಯಸುತ್ತೇನೆ. ಜನರು ಈ ವಿಷಯದ ಬಗ್ಗೆ ಆಗಲೇ ತೀರ್ಮಾನಿಸುತ್ತಿರುವುದನ್ನು ನೋಡಿ ನನಗೆ ನಂಬಲು ಸಾಧ್ಯವಾಗುತ್ತಿಲ್ಲ.

ದರ್ಶನ್​ ಅಣ್ಣ ತಮ್ಮ ಕನಸಿನಲ್ಲೂ ಯಾರಿಗೂ ತೊಂದರೆ ಕೊಡಲು ಬಯಸುವವರಲ್ಲ. ಉದಾರತೆ, ಸಹೃದಯ ಸ್ವಭಾವ ಮತ್ತು ಇತರರಿಗೆ ಸಹಾಯ ಮಾಡುವ ಗುಣ ದರ್ಶನ್ ಅವರಿಗಿದೆ. ಅವರು ಯಾವಾಗಲೂ ಅಗತ್ಯವಿರುವವರ ಸಹಾಯಕ್ಕೆ ಧಾವಿಸುತ್ತಾರೆ. ಅವರು ಅನೇಕರಿಗೆ ಶಕ್ತಿಯ ಆಧಾರಸ್ತಂಭವಾಗಿದ್ದಾರೆ. ನಾನು ಈಗಲೂ ಸುದ್ದಿಯನ್ನು ಒಪ್ಪಿಕೊಳ್ಳಲಾರೆ. ನ್ಯಾಯಾಂಗದ ಮೇಲೆ ನಮಗೆ ನಂಬಿಕೆಯಿದ್ದು, ಸತ್ಯವು ಶೀಘ್ರದಲ್ಲೇ ಹೊರಬರುತ್ತದೆ.

ಇದೇ ಸಮಯದಲ್ಲಿ ಇನ್ನೊಂದು ಕುಟುಂಬ ನರಳುತ್ತಿದೆ ಎಂಬುದನ್ನು ನಾವು ಮೊದಲು ನೆನೆಪಿನಲ್ಲಿಟ್ಟುಕೊಳ್ಳಬೇಕು. ಈ ಸವಾಲಿನ ಅವಧಿಯಲ್ಲಿ ಅವರು ಗೌಪ್ಯತೆ ಮತ್ತು ಗೌರವಕ್ಕೆ ಅರ್ಹರಾಗಿದ್ದಾರೆ. ಸಹಾನುಭೂತಿಗೆ ಹೆಸರುವಾಸಿಯಾದ ಅಣ್ಣ ಅವರು ನಿರಪರಾಧಿ ಎಂಬುದು ಸಾಬೀತಾಗುತ್ತದೆ. ನಿಜವಾದ ಅಪರಾಧಿ ಯಾರೆಂಬುದು ಗೊತ್ತಾಗುತ್ತದೆ ಎಂದು ತೆಲುಗು ನಟ ನಾಗಶೌರ್ಯ ದರ್ಶನ್​ಗೆ ಬೆಂಬಲ ಸೂಚಿಸಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.