ಮದ್ದೂರು: ಕನ್ನಡಿಗರ ಗೌರವ ಸಂಕೇತವಾದ ಬೆಂಗಳೂರನ್ನು ನಿರ್ಮಾಣ ಮಾಡಿದ ಕೆಂಪೇಗೌಡರ ಇತಿಹಾಸ ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಧನಂಜಯ ತಿಳಿಸಿದರು.
ತಾಲೂಕಿನ ಕೆ.ಹೊನ್ನಗೆರೆಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಂಪೇಗೌಡರು ಕೇವಲ ಮಾರುಕಟ್ಟೆ ನಿರ್ಮಾಣಕ್ಕೆ ಸೀಮಿತವಾಗಿರಲಿಲ್ಲ. ಅವರು ಪರಿಸರ ರಕ್ಷಕರಾಗಿದ್ದು, ಒಬ್ಬ ವ್ಯಕ್ತಿ ತಮ್ಮ ಜೀವಿತಾವಧಿಯಲ್ಲಿ 260 ಕ್ಕೂ ಹೆಚ್ಚು ಕೆರೆಗಳನ್ನು ಮಾಡಿರುವುದು ವಿಶ್ವ ದಾಖಲೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಯಾಗಿದೆ. ಕೋಟ್ಯಂತರ ಜನರಿಗೆ ಬದುಕು ಕಲ್ಪಿಸಿಕೊಟ್ಟಿದೆ ಎಂದರೆ ಅದಕ್ಕೆ ಮುಖ್ಯಕಾರಣ ಕೆಂಪೇಗೌಡರ ದೂರದೃಷ್ಟಿ ಹಾಗೂ ಜನರ ಮೇಲಿದ್ದ ಕಾಳಜಿ ಎಂದರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಧನಂಜಯ ಅವರು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜೀವನದಲ್ಲಿ ಮುಖ್ಯ ಘಟ್ಟ. ಇದನ್ನರಿತು ವಿದ್ಯಾರ್ಥಿಗಳು ಇಂದಿನಿಂದಲೇ ಕಠಿಣ ಶ್ರಮಪಟ್ಟು ವ್ಯಾಸಂಗ ಮಾಡಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ಪಾಲಕರಿಗೆ ಹಾಗೂ ಶಿಕ್ಷಕರಿಗೆ ಕೀರ್ತಿ ತರಬೇಕೆಂದು ಸಲಹೆ ನೀಡಿದರು.
ಉಪ ಪ್ರಾಂಶುಪಾಲ ಚಂದ್ರಶೇಖರ್, ಮುಖ್ಯಶಿಕ್ಷಕ ವೆಂಕಟೇಶ್, ಇಸಿಒ ಲೋಕೇಶ್, ಸಹಶಿಕ್ಷಕರಾದ ಬಿ.ವಿ.ಹಳ್ಳಿನಾರಾಯಣ್, ವನಿತಾ, ಚೇತನಾ, ಮಹಮದ್ ರಫೀಕ್ ಡಂಬಾಳ್, ರಂಜಿತಾ, ರೂಪಾ, ರೇಷ್ಮಾ, ಅನ್ನಪೂರ್ಣಾ ಹಾಗೂ ಭವ್ಯಾ ಸೇರಿದಂತೆ ಇನ್ನಿತರರು ಹಾಜರಿದ್ದರು.