ಭದ್ರಾವತಿ: ಸಾಂಸ್ಕೃತಿಕ ನಾಯಕ ಬಸವಣ್ಣನವರ ವಚನಗಳನ್ನು ಅಧ್ಯಯನ ಮಾಡುವ ಜತೆಗೆ ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ತಿಳಿಸಿದರು.
ನಗರದ ಕನಕಮಂಟಪ ಮೈದಾನದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಶ್ರೀ ವಿಶ್ವಗುರು ಬಸವಣ್ಣನ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗುರುಗಳು ಯಾವುದೇ ಜಾತಿಗೆ ಸೀಮಿತರಲ್ಲ. ಅವರು ಮನುಕುಲದ ಉದ್ಧಾರಕರು. ಪಾಲಕರು ತಮ್ಮ ಮಕ್ಕಳಿಗೆ ಸಮಾಜ ಸುಧಾರಕರಾದ ಅಂಬೇಡ್ಕರ್, ಬಸವಣ್ಣ, ಅಕ್ಕಮಹಾದೇವಿ ಸೇರಿ ಮಹಾನ್ ನಾಯಕರ ಇತಿಹಾಸ ತಿಳಿಸಿಕೊಡುವ ಕೆಲಸ ಮಾಡಬೇಕು. ಭದ್ರಾವತಿಯಲ್ಲಿ ಬಸವಣ್ಣವರ ಪುತ್ಥಳಿ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಎಂದರು.
ಲೇಖಕ ಚಟ್ನಳ್ಳಿ ಮಹೇಶ್ ಉಪನ್ಯಾಸ ನೀಡಿ, ಯಾವುದೇ ಒಂದು ವೃತ್ತಿ ಜಾತಿ ಆಗಲಾರದು. ವೃತ್ತಿ ಜಾತಿ ಸೂಚಕವಲ್ಲ. ಇಂದು ರಾಜಕೀಯ ಸೇರಿ ಎಲ್ಲ ರಂಗಗಳಲ್ಲಿ ಮಾತಿನ ಮಾಲಿನ್ಯವಾಗುತ್ತಿದೆ. ಮಾತು ಆಡುವವರೆಗೂ ನಮ್ಮದು, ನಂತರ ಸಾರ್ವಜನಿಕರ ಸ್ವತ್ತಾಗುತ್ತದೆ ಎಂಬುದನ್ನು ಮರೆಯಬಾರದು. ಅದಕ್ಕಾಗಿಯೇ ವಚನಕಾರರು ನುಡಿದರೆ ಅದು ಸ್ಫಟಿಕದಂತಿರಬೇಕು ಎಂದು ಹೇಳಿದ್ದಾರೆ ಎಂದರು.
ನಗರದ ಪ್ರಮುಖ ರಸ್ತೆಗಳಲ್ಲಿ ಬಸವಣ್ಣನ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ತಹಸೀಲ್ದಾರ್ ಪರುಸಪ್ಪ ಕುರುಬರ, ಬಿಇಒ ಎ.ಕೆ.ನಾಗೇಂದ್ರಪ್ಪ, ಬಿ.ಕೆ.ಮೋಹನ್, ಕದಿರೇಶ್, ರವಿಕುಮಾರ್, ಬಿ.ಎಸ್.ಗೋಪಾಲ್, ಕೆ.ಎಚ್.ತೀರ್ಥಯ್ಯ, ಚನ್ನಪ್ಪ, ಸುಮಾ ಅನಿಲ್, ಎಸ್.ವಿ.ಶಶಿಕುಮಾರ್ ಇತರರಿದ್ದರು.