ಬೆಂಗಳೂರು: ಪ್ರತಿಷ್ಠಿತ ಟೆಸ್ಕೊ ಗ್ರೂಪ್ ಕಂಪನಿಯು ಬೆಂಗಳೂರಿನಲ್ಲಿ ತನ್ನ ಕಾರ್ಯಾಚರಣೆ ವಿಸ್ತರಿಸಲು ಉದ್ದೇಶಿಸಿದ್ದು, ಹೊಸಕೋಟೆಯಲ್ಲಿ ಹೊಸ ವಿತರಣಾ ಕೇಂದ್ರ ಸ್ಥಾಪಿಸಲಿದೆ. ಇದರಿಂದ 16,500 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಇನ್ವೆಸ್ಟ್ ಕರ್ನಾಟಕದ ಅಂತರರಾಷ್ಟ್ರೀಯ ರೋಡ್‌ಷೋದ ಭಾಗವಾಗಿ ಲಂಡನ್‌ನಲ್ಲಿ ಸಚಿವರ ನೇತೃತ್ವದ ತಂಡ ಎರಡನೇ ದಿನ ರೋಡ್ ಶೋ ನಡೆಸಿ, ರೋಲ್ಸ್ ರಾಯ್ಸ, ಮೆಗೆಲ್ಲನ್ ಏರೋಸ್ಪೇಸ್, ಟೆಸ್ಕೊ ಮತ್ತು ಪಿಯರ್ಸನ್ ಕಂಪನಿಗಳ ಮುಖ್ಯಸ್ಥರ ಜತೆಗೆ ಸಮಾಲೋಚಿಸಿದೆ.
ನಂತರ ಸಚಿವ ಎಂ.ಬಿ.ಪಾಟೀಲ ಈ ಬಗ್ಗೆ ಮಾಹಿತಿ ನೀಡಿ, ಟೆಸ್ಕೊ ಗ್ರೂಪ್ ತನ್ನ ವಹಿವಾಟು ವಿಸ್ತರಿಸಲು ಹೊಸದಾಗಿ 1,500 ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ. ಹೊಸಕೋಟೆಯಲ್ಲಿ ಹೊಸ ವಿತರಣಾ ಕೇಂದ್ರ ಸ್ಥಾಪನೆಯಿಂದ 16,500 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದಿದ್ದಾರೆ.
ಕರ್ನಾಟಕದ ವೈಮಾಂತರಿಕ್ಷ- ರಕ್ಷಣೆ, ವಾಹನ ತಯಾರಿಕೆ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳನ್ನು ಇಂಗ್ಲೆಂಡ್‌ನ ಉನ್ನತ ಜಾಗತಿಕ ಕಂಪನಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ.
ರಾಜ್ಯದಲ್ಲಿನ ಸದೃಢ ಮೂಲಸೌಲಭ್ಯ, ಉದ್ಯಮ ಪೂರಕ ವಾತಾವರಣ ಮತ್ತು ಕ್ವಿನ್ ಸಿಟಿ ಯೋಜನೆಗಳಂತಹ ದೂರದೃಷ್ಟಿಯ ಉಪಕ್ರಮಗಳನ್ನು ಪರಿಚಯಿಸಿದ್ದಾರೆ. ಈ ಚರ್ಚೆಯಲ್ಲಿ ಭಾಗವಹಿಸಿದ್ದ ಪ್ರಮುಖ ಕಂಪನಿಗಳ ಮುಖ್ಯಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್‌ನ ಪ್ರಮುಖ ಶೈಕ್ಷಣಿಕ ಕಂಪನಿಯಾಗಿರುವ ಪಿಯರ್ಸನ್ ಗ್ರೂಪ್, ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಕಲಿಕೆಯ ಪರಿಹಾರ ಮತ್ತು ಪಾಲುದಾರಿಕೆ ಬಲಪಡಿಸುವ ಮೂಲಕ ಭಾರತದಲ್ಲಿ ತನ್ನ ಕಾರ್ಯಾಚರಣೆ ವಿಸ್ತರಿಸಲು ಆಸಕ್ತಿ ವ್ಯಕ್ತಪಡಿಸಿದೆ.
ಮೆಗೆಲ್ಲನ್ ಏರೊಸ್ಪೇಸ್ ಕಂಪನಿಯ ವಿಸ್ತರಣಾ ಯೋಜನೆಗಳಿಗೆ ರಾಜ್ಯ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಸಚಿವ ಎಂ.ಬಿ.ಪಾಟೀಲ ಭರವಸೆ ನೀಡಿದ್ದಾರೆ. ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್, ಆಯುಕ್ತೆ ಗುಂಜನ್‌ಕೃಷ್ಣ ಇದ್ದರು.