ನ್ಯೂಸ್

ಮಂಗಗಳಿಗೆ ಸಿಹಿ ಸುದ್ದಿ: ಒಂದೇ ಕಡೆ ರುಚಿರುಚಿ ಹಣ್ಣು ತಿನ್ನಿಸಲು ತೆಲಂಗಾಣ ಸಿದ್ಧತೆ

ಹೈದರಾಬಾದ್: ಮಂಗನ ಕಾಟದಿಂದ ಬಸವಳಿಯುತ್ತಿರುವ ರಾಜ್ಯಗಳು ಅದೆಷ್ಟೋ. ಈಗಂತೂ ಆಹಾರಕ್ಕಾಗಿ ಪರದಾಡುತ್ತಿರುವ ಕೋತಿಗಳು ಸೃಷ್ಟಿಸುತ್ತಿರುವ ಅವಾಂತರ ಒಂದಲ್ಲಾ,,, ಎರಡಲ್ಲಾ..

ಇವುಗಳ ಕಾಟದಿಂದ ಬೇಸತ್ತಿರುವ ತೆಲಂಗಾಣ ಸರ್ಕಾರ ಇದೀಗ ವಿನೂತನ ಪ್ರಯತ್ನಕ್ಕೆ ಕೈಹಾಕಿದೆ. ಅದೇನೆಂದರೆ ರಾಜ್ಯಾದ್ಯಂತ 'ಮಂಕಿ ಫುಡ್ ಕೋರ್ಟ್' (ಮಂಗಗಳ ಆಹಾರ ಘಟಕ) ಸ್ಥಾಪಿಸಲು ನಿರ್ಧರಿಸಿದೆ.

ತೆಲಂಗನಕು ಹರಿಥಾ ಹರಾಮ್ ಯೋಜನೆಯ ಆರನೇ ಭಾಗವಾಗಿ ಈ ಆಹಾರ ಘಟಕ ಸ್ಥಾಪಿಸಲಾಗುವುದು ಎಂದು ಸರ್ಕಾರ ಹೇಳಿದೆ. ಜನನಿಬಿಡ ಪ್ರದೇಶಗಳಲ್ಲಿ ಕೋತಿಗಳ ದಾಂಧಲೆ ನಡೆಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಅವುಗಳಿಗಾಗಿಯೇ ಹಣ್ಣಿನ ಮರಗಳನ್ನು ನೆಡುವ ಯೋಜನೆ ಇದಾಗಿದೆ.

ಕಾಡುಗಳಿಂದ ನೂರಾರು ಕೋತಿಗಳು ಇತ್ತೀಚಿನ ದಿನಗಳಲ್ಲಿ ಆಹಾರವನ್ನು ಹುಡುಕುತ್ತಾ ಹಳ್ಳಿಗಳು, ಪಟ್ಟಣಗಳು ​​ಮತ್ತು ಸಿಕಂದರಾಬಾದ್ ಮತ್ತು ಹೈದರಾಬಾದ್ ಅವಳಿ ನಗರಗಳನ್ನು ಪ್ರವೇಶಿಸಿವೆ. ಅವುಗಳಿಗೆ ಆಹಾರವಿಲ್ಲದೇ ಜನವಸತಿ ಪ್ರದೇಶಗಳಿಗೆ ದಾಳಿ ಇಡುತ್ತಿವೆ. ಇದರಿಂದ ಜನರು ಭಯಭೀತರಾಗಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಹಿನ್ನೆಲೆಯಲ್ಲಿ ವಾರಂಗಲ್ ಜಿಲ್ಲೆಯ ಹಳ್ಳಿಯ ಹೊರವಲಯದಲ್ಲಿರುವ 20 ಗುಂಟೆ ಭೂಮಿಯಲ್ಲಿ 'ಮಂಕಿ ಫುಡ್ ಕೋರ್ಟ್' ಯೋಚನೆ ಮಾಡಲಾಗಿದೆ. ಇಲ್ಲಿ ನೀರಿನ ವ್ಯವಸ್ಥೆಯನ್ನೂ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ.

ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಕುರಿತು ಚರ್ಚಿಸಿದ್ದಾರೆ.

ಇದು ಒಂದೆಡೆ ಯಶಸ್ವಿಯಾದರೆ, ಎಲ್ಲಾ ಜಿಲ್ಲೆಗಳಲ್ಲಿಯೂ ಇದನ್ನು ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ. ಒಟ್ಟು 14 ಬಗೆಯ ಹಣ್ಣಿನ ಮರಗಳನ್ನು ಇಲ್ಲಿ ನೆಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಸೀಬೆ, ಹುಣಸೆಹಣ್ನು, ನೆಲ್ಲಿಕಾಯಿ, ಪ್ಲಮ್‌, ಕಸ್ಟರ್ಡ್‌ ಆ್ಯಪ್ಪಲ್‌ ಸೇರಿದಂತೆ ಹಲವು ಬಗೆಯ ಹಣ್ಣುಗಳ ಗಿಡಗಳನ್ನು ನೆಡುವ ಯೋಜನೆ ಇದಾಗಿದೆ.

ಇದು ಯಶಸ್ವಿಯಾದರೆ ಮಂಗಗಳಿಗೆ ಇನ್ನುಮುಂದೆ ರುಚಿರುಚಿ ಹಣ್ಣಿನ ಸೇವನೆಗೆ ಒಂದೇ ಸ್ಥಳದಲ್ಲಿ ಅವಕಾಶ ಸಿಗಲಿದೆ. ಜನರೂ ನಿರಾಳರಾಗಲಿದ್ದಾರೆ. (ಏಜೆನ್ಸೀಸ್‌)