ಹೈದ್ರಾಬಾದ್: ಲಾಕ್ಡೌನ್ನಿಂದ ತತ್ತರಿಸಿದ ವ್ಯಕ್ತಿ ಆಹಾರ ಒದಗಿಸಲು ಸಾಧ್ಯವಾಗದೆ ನಾಲ್ಕು ವರ್ಷದ ಮಗಳನ್ನು ಹತ್ಯೆ ಮಾಡಿರುವ ಅಮಾನವೀಯ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ಕೊಲೆ ಮಾಡಿದ ಆರೋಪದ ಮೇಲೆ ರಾಮವತ್ ಜೀವನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪುಲ್ಕಲ್ ಮಂಡಲದ ಗೊಗ್ಗಲೂರು ಗ್ರಾಮದ ರಾಮವತ್ ಜೀವನ್ ಲಾಕ್ಡೌನ್ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡಿದ್ದರು. ಅಲ್ಲದೆ ಅವರು ಸಂಸಾರ ನಿರ್ವಹಣೆಗೆ ಈಗಾಗಲೇ ಸಾಕಷ್ಟು ಸಾಲ ಕೂಡ ಮಾಡಿದ್ದರು. ಇವರಿಗೆ ಮೂವರು ಮಕ್ಕಳು ಇದ್ದರು. ಮಕ್ಕಳಿಗೆ ಆಹಾರ ಒದಗಿಸಲು ತುಂಬಾ ಕಷ್ಟಪಡುತ್ತಿದ್ದರು.
ಗುರುವಾರ ರಾತ್ರಿ ಮಕ್ಕಳು ಮಲಗಿದ್ದ ವೇಳೆ ರಾಮವತ್ ಜೀವನ್ 4 ವರ್ಷದ ಮಗಳನ್ನು ಪಕ್ಕದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಚಾಕುವಿನಿಂದ ಇರಿದು ಕೊಲೆ ಮಾಡಿ ಶವ ಬಿಸಾಡಿ ಬಂದು ಮಲಗಿದ್ದ. ಅಲ್ಲದೆ ಪತ್ನಿಗೆ ಮಗಳು ಕಾಣಿಯಾಗಿದ್ದಾಳೆ ಎಂದು ಹೇಳಿದ್ದ. ಅನುಮಾನ ಬಂದ ಆಕೆ ಪೊಲೀಸರಿಗೆ ದೂರು ನೀಡಿದಳು.
ಪೊಲೀಸರು ರಾಮವತ್ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮಗಳನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ.
ಮೂವರು ಮಕ್ಕಳು ಇದ್ದು ಅವರಿಗೆ ಹೊಟ್ಟೆ ತುಂಬ ಊಟ ಹಾಕಲು ಸಾಧ್ಯವಿರಲಿಲ್ಲ. ಸಾಲ ಮಾಡಿಕೊಂಡಿದ್ದೆ. ಇದರಿಂದ ತೀವ್ರ ಒತ್ತಡಕ್ಕೆ ಒಳಗಾಗಿದ್ದೆ. ಮಕ್ಕಳನ್ನು ಕೊಲ್ಲುವ ನಿರ್ಧಾರಕ್ಕೆ ಬಂದು ಮೊದಲು ಮಗಳನ್ನು ಕೊಲೆ ಮಾಡಿದೆ. ಕೊಲೆ ಮಾಡುತ್ತಿರುವಾಗ ಏನು ಮಾಡುತ್ತಿದ್ದೀನಿ ಎಂಬುದರ ಅರಿವು ನನಗೆ ಇರಲಿಲ್ಲ ಎಂದು ಪೊಲೀಸರ ಮುಂದೆ ಹೇಳಿದ್ದಾನೆ.
ಲಾಕ್ಡೌನ್ ಹಾಗೂ ಆರ್ಥಿಕ ಬಿಕ್ಕಟ್ಟಿನ ಒತ್ತಡದಿಂದ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇಸು ದಾಖಲಿಸಿದ್ದಾರೆ (ಏಜೆನ್ಸೀಸ್)