k chandrashekar rao 
ನ್ಯೂಸ್

ತೆಲಂಗಾಣ ಸರ್ಕಾರಿ ನೌಕರರಿಗೆ ಭರ್ಜರಿ ಉಡುಗೊರೆ ನೀಡಿದ ಮಖ್ಯಮಂತ್ರಿ ಕೆಸಿಆರ್

ಹೈದರಾಬಾದ್: ತೆಲಂಗಾಣ ರಾಜ್ಯ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಭರ್ಜರಿ ಉಡುಗೊರೆ ನೀಡಿದ್ದಾರೆ. ಶೇ 30 ರಷ್ಟು ವೇತನವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದಾರೆ.

ಅಲ್ಲದೇ ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58 ರಿಂದ 61 ಕ್ಕೆ ಹೆಚ್ಚಳ ಮಾಡಿ ಆದೇಶ ಮಾಡಿದ್ದಾರೆ. 11 ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ತಿಳಿಸಿದ್ದಾರೆ. ಇದೇ ವರ್ಷ ಏಪ್ರಿಲ್​ನಿಂದ ವೇತನ ಹೆಚ್ಚಳ ಜಾರಿಗೆ ಬರಲಿದೆ. ವೇತನ ಹೆಚ್ಚಳ ಮಾಡುತ್ತಿರುವುದು ನನಗೆ ಅತೀವ ಸಂತಸ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ತೆಲಂಗಾಣ ಸರ್ಕಾರಿ ನೌಕರರು ಕಳೆದ ಅನೇಕ ವರ್ಷಗಳಿಂದ ವೇತನ ಹೆಚ್ಚಳಕ್ಕೆ ಹೋರಾಟ ಮಾಡುತ್ತಾ ಬಂದಿದ್ದರು. ಕೇವಲ ಸರ್ಕಾರಿ ನೌಕರರಿಗೆ ಅಷ್ಟೇ ಅಲ್ಲದೇ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವರಿಗೆ, ಹೋಮ್​ ಗಾರ್ಡ್​​ಗಳಿಗೆ, ಆಶಾ, ಅಂಗನವಾಡಿ ಕಾರ್ಯಕರ್ತರಿಗೂ ವೇತನವನ್ನು ಹೆಚ್ಚಳ ಮಾಡಲಾಗಿದೆ.

ಕರೊನಾ ಬಿಕ್ಕಟ್ಟಿನಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಹೀಗಾಗಿ ವೇತನ ಹೆಚ್ಚಳ ಮಾಡುವುದು ಒಂದು ವರ್ಷ ತಡವಾಯಿತು ಎಂದು ಮುಖ್ಯಮಂತ್ರಿ ಕೆಸಿಆರ್ ಹೇಳಿದ್ದಾರೆ.