ಬೆಂಗಳೂರು: ಸಾಂಸ್ಕೃತಿಕ ನಾಡಹಬ್ಬ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕಲಾವಿದರ ಬಳಿ ರಾಜ್ಯ ಸರ್ಕಾರ ಕಮಿಷನ್ ಕೇಳುತ್ತಿದೆ. ಇದು ನಾಚೆಕೆಗೇಡಿನ ಸಂಗತಿ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನೇರ ಆರೋಪ ಎಸಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ, "ನಾಡಹಬ್ಬ ರಾಜ್ಯದ ಸಾಂಸ್ಕೃತಿಕ ಹೆಮ್ಮೆಯ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕೂಡ ಕಮಿಷನ್ ಪಡೆಯುತ್ತಿರುವ INC (ಇಂಡಿಯನ್ ನ್ಯಾಷನಲ್ ಕಮಿಷನ್) ಪಕ್ಷದ ಹಸಿವು ಯಾವ ಮಟ್ಟಿಗಿದೆ ಎಂದರೆ ಪದ್ಮಶ್ರೀ ಪುರಸ್ಕೃತರ ಕಾರ್ಯಕ್ರಮದಲ್ಲಿಯೂ ತನ್ನ 'ಕೈ' ಚಳಕದ ಬುದ್ಧಿ ತೋರಿಸುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ" ಎಂದು ಹೇಳಿದರು.
"ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ಪ್ರತಿನಿತ್ಯ ಇಂತಹ ಹಗಲು ದರೋಡೆಯ ಸುದ್ದಿಗಳಿಗೇ ಸಾಕ್ಷಿಯಾಗಿರುವ ರಾಜ್ಯದ ಜನತೆಗೆ ಇದು ಇಂದಿನ ಪ್ರಮುಖ ಸುದ್ದಿಯಷ್ಟೇ ಆದರೂ, ನಾಡಿನ ಸಾಂಸ್ಕೃತಿಕ ಹಿರಿಮೆಗೆ ಕೊಡುಗೆ ನೀಡಿರುವ ಕಲಾವಿದರಿಂದಲೂ ಕಮಿಷನ್ ಕೇಳುತ್ತಿರುವುದು ಸ'ಮಜಾವಾದಿ' ಖ್ಯಾತಿಯ ಸಿದ್ದರಾಮಯ್ಯ ಅವರ ಆಡಳಿತದ ಮಾದರಿಯ ಪ್ರತೀಕ" ಎಂದರು.
"ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ದೇಶದ ಮೂಲೆ ಮೂಲೆಗಳಿಂದ ಎಲೆಮರೆ ಕಾಯಿಯಂತಿದ್ದ ಅನೇಕ ಪ್ರತಿಭಾನ್ವಿತ ಸಾಧಕರು, ಕ್ರೀಡಾಪಟುಗಳು, ಕಲಾವಿದರನ್ನು ಗೌರವಿಸಿ, ಪದ್ಮ ಪ್ರಶಸ್ತಿ ನೀಡಿ ಗೌರವಿಸಿರುವುದು ಒಂದೆಡೆಯಾದರೆ, ಹೆಮ್ಮೆಯ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೂಡ ಕಮಿಷನ್ ಪಡೆಯುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ" ಎಂದು ಹೇಳಿದರು.
"ದೇಶ, ರಾಜ್ಯವನ್ನು ಲೂಟಿ ಮಾಡುವ ಕರ ಕುಶಲಕಲೆಯಲ್ಲಿ ಕಳೆದ 75 ವರ್ಷಗಳಿಂದಲೂ ನಿಷ್ಣಾತವಾಗಿರುವ ಕಾಂಗ್ರೆಸ್, ಕಲಾವಿದರ ಸಂಭಾವನೆಯಲ್ಲಿಯೂ 'ಕೈ' ತೂರಿಸುತ್ತಿರುವುದು ನಾಡಿನ ಸಾಂಸ್ಕೃತಿಕ ಲೋಕಕ್ಕೆ ಕಪ್ಪು ಚುಕ್ಕೆ. ತಥಾಕಥಿತ ಪ್ರಗತಿಪರರು, ಬುದ್ಧಿಜೀವಿಗಳು ತಮ್ಮ ದಿವ್ಯಮೌನವನ್ನು ಮುರಿದು ಸಾಂಸ್ಕೃತಿಕ ದರೋಡೆಯ ಇಂತಹ ಕಳಂಕದ ವಿರುದ್ಧದ ಧ್ವನಿ ಎತ್ತುವರೇ?" ಎಂದು ಹೇಳಿದರು.
ಇದನ್ನೂ ಓದಿ: Assembly Elections 2023: ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದವರಿವರು!
"ಕಾಂಗ್ರೆಸ್ನ ಈ ರೀತಿಯ ಸರ್ಕಾರಿ ಪ್ರಾಯೋಜಿತ ಅಧಿಕೃತ ದರೋಡೆ ಯೋಜನೆಗಳಿಂದ ಕೆಲವೇ ದಿನಗಳಲ್ಲಿ ರಾಜ್ಯವನ್ನು ದಿವಾಳಿಗೆ ತಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ" ಎಂದು ರಾಜ್ಯ ಸರ್ಕಾರದ ವಿರುದ್ಧ ನೇರ ಆರೋಪ ಎಸಗಿದ್ದಾರೆ.