Tejashwi Yadav: ರಾಷ್ಟ್ರೀಯ ಜನತಾ ದಳದ ಯುವ ನಾಯಕ ತೇಜಸ್ವಿ ಯಾದವ್, ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿದೆ. ರಾಜ್ಯಾದ್ಯಂತ ಯಾದವ್ ಕುಟುಂಬದ ಭದ್ರಕೋಟೆ ಎಂದು ಬಿಂಬಿತವಾಗಿರುವ ರಾಘೋಪೂರ್ ಕ್ಷೇತ್ರ, ಇನ್ನೊಂದು ಮಧುಬನಿಯ ಫುಲ್ಪರಾಸ್. ಪ್ರಸ್ತುತ ಅಲ್ಲಿ ಜನತಾದಳ ಯುನೈಟೆಡ್ ಪಕ್ಷದ ಶೀಲಾ ಕುಮಾರಿ ಹಾಲಿ ಶಾಸಕಿಯಾಗಿದ್ದಾರೆ.
ಫುಲ್ಪರಾಸ್ ವಿಧಾನಸಭಾ ಕ್ಷೇತ್ರ ಕಳೆದ 15 ವರ್ಷಗಳಿಂದ ಜೆಡಿಯು ಪಕ್ಷದ ಭದ್ರಕೋಟೆಯಾಗಿದ್ದು, ಇಲ್ಲಿನ ಗೆಲುವು ಸಾಧಿಸಿದರೆ ಆರ್‌ಜೆಡಿ ಪಾಳಯದ ಆತ್ಮ ವಿಶ್ವಾಸ ಹೆಚ್ಚಿಸಲಿದೆ. 2020 ರ ವಿಧಾನಸಭಾ ಚುನಾವಣೆಯಲ್ಲಿ ತೇಜಸ್ವಿ ಯಾದವ್ ರಾಘೋಪುರ್ ಕ್ಷೇತ್ರದಲ್ಲಿ 38,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿಯ ಸತೀಶ್ ಕುಮಾರ್ನ್ನು ಸೋಲಿಸಿದರು. ತೇಜಸ್ವಿ ಪೋಷಕರಾದ ಲಾಲು ಪ್ರಸಾದ್ ಮತ್ತು ರಾಬ್ರಿ ದೇವಿ ಇದೇ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್, ಒಮ್ಮೆ ಫುಲ್ಪರಸ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು, ಆರ್‌ಜೆಡಿಯ ಈ ತಂತ್ರ ತನ್ನ ಸಾಂಪ್ರದಾಯಿಕ ಮುಸ್ಲಿಂ-ಯಾದವ್ ಮತಗಳ ನೆಲೆಯನ್ನು ಕ್ರೋಢೀಕರಿಸುವುದಷ್ಟೆ ಅಲ್ಲದೇ, ಬಿಹಾರದ ಜನಸಂಖ್ಯೆಯ ಸುಮಾರು ಶೇ 36% ರಷ್ಟಿರುವ ಅತ್ಯಂತ ಹಿಂದುಳಿದ ವರ್ಗಗಳ ಬೆಂಬಲವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ಇದಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಇತ್ತೀಚೆಗೆ ಫುಲ್ಪರಸ್‌ನ ಪ್ರಮುಖ ಇಬಿಸಿ ನಾಯಕ ಮಂಗ್ನಿ ಲಾಲ್ ಮಂಡಲ್ರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿದ್ದು, ಈ ನಿರ್ಧಾರ ಮಿಥಿಲಾಂಚಲ್‌ನಲ್ಲಿ ಪಕ್ಷದ ಬೇರುಗಳನ್ನು ಗಟ್ಟಿಗೊಳಿಸುವ ಪ್ರಯತ್ನವೆಂದು ವಿಶ್ಲೇಷಿಸಲಾಗುತ್ತಿದೆ.
ಫುಲ್ಪರಸ್‌ನಿಂದ ತೇಜಸ್ವಿ ನಾಮಪತ್ರ ಸಲ್ಲಿಸುವುದು, ಇಬಿಸಿ ಸಮುದಾಯಕ್ಕೆ ಬಲವಾದ ಸಂದೇಶವನ್ನು ರವಾನಿಸುವುದರೊಂದಿಗೆ, ಈ ಪ್ರದೇಶದಲ್ಲಿ ಆರ್‌ಜೆಡಿಯ ಭವಿಷ್ಯವನ್ನು ಬಲಪಡಿಸಬಹುದು, ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದರಿಂದ ರಾಜ್ಯಾದ್ಯಂತ ಪಕ್ಷಕ್ಕೆ ಆನೆ ಬಲ ಬರಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.(ಏಜೆನ್ಸೀಸ್)