ಪಾಲ್ಘರ್: ಅಪ್ರಾಪ್ತ ವಯಸ್ಕಳೊಬ್ಬಳು ಕಿಡ್ನ್ಯಾಪ್ ನಾಟಕವಾಡಿ ಬಾಯ್ಫ್ರೆಂಡ್ ಜತೆಗೆ ಓಡಿಹೋಗಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ಎಂಬಲ್ಲಿ ನಡೆದಿದೆ.
ವಿರಾರ್ ಪ್ರದೇಶದಲ್ಲಿ ನೆಲೆಸಿರುವ ಮತ್ತು ಕಂಪನಿಯೊಂದರ ಹೌಸ್‌ಕೀಪಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ 17 ವರ್ಷದ ಬಾಲಕಿ ಕಳೆದ ಶುಕ್ರವಾರದಂದು ಕೆಲಸಕ್ಕೆ ತೆರಳಿದ್ದಳು. ಆದರೆ ರಾತ್ರಿಯಾದರೂ ಮನೆಗೆ ಹಿಂದಿರುಗಿರಲಿಲ್ಲ. ಆಕೆಯ ಬಗ್ಗೆ ಆತಂಕಗೊಂಡ ಕುಟುಂಬಸ್ಥರು ಸ್ನೇಹಿತರು, ಆಫೀಸ್ ಸಿಬ್ಬಂದಿಯನ್ನು ವಿಚಾರಿಸಿದ್ದರು.
ಇದನ್ನೂ ಓದಿ: ಪದವಿ ಕಾಲೇಜುಗಳಲ್ಲಿ ಯೋಗ ದಿನಾಚರಣೆಗೆ ಸೂಚನೆ
ಈ ವೇಳೆ ಯುವತಿಯ ಸಹೋದರನಿಗೆ ವಾಟ್ಸ್ಆ್ಯಪ್ ಮೂಲಕ ವಾಯ್ಸ್ ಮೆಸೇಜ್ ಕಳುಹಿಸಿ ತನ್ನನ್ನು ಯಾರೋ ಅಪಹರಿಸಿದ್ದಾರೆ. ತನಗೆ ಏನು ನಡೆಯುತ್ತಿದೆ ಎಂಬುದೇ ತಿಳಿಯುತ್ತಿಲ್ಲ ಎಂದು ಹೇಳಿ ತಾನು ಪ್ರೀತಿಸುತ್ತಿದ್ದ ಯುವಕನ ಜತೆಗೆ ಕೋಲ್ಕತಾಗೆ ಓಡಿ ಹೋಗಿದ್ದಾಳೆ.
ಕೂಡಲೇ ಆಕೆಯ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ, ನಡೆದ ಘಟನೆ ಬಗ್ಗೆ ತಿಳಿಸಿ ದೂರು ದಾಖಲಿಸಿದ್ದಾರೆ. ತಕ್ಷಣವೇ ಪೊಲೀಸರು ತನಿಖೆಯನ್ನು ಪ್ರಾರಂಭಿಸಿ ಕೆಲವೇ ಘಂಟೆಗಳಲ್ಲಿ, ಹುಡುಗಿ ತನ್ನ ಗೆಳೆಯನೊಂದಿಗೆ ಪಶ್ಚಿಮ ಬಂಗಾಳದ ಕೋಲ್ಕತ್ತಾಗೆ ವಿಮಾನದ ಮೂಲಕ ಹೋಗಿದ್ದಾಳೆ ಎಂಬ ಮಾಹಿತಿಯನ್ನು ಕಲೆ ಹಾಕಿದೆ.
ಸದ್ಯ, ಇವರಿಬ್ಬರ ಪತ್ತೆಗೆ ಮಹಾರಾಷ್ಟ್ರ ಪೊಲೀಸ್ ತಂಡವು ಕೋಲ್ಕತಾಗೆ ತೆರಳಿದ್ದು, ಬಾಲಕಿಯು ಅಪ್ರಾಪ್ತ ವಯಸ್ಸಿನವಳಾಗಿರುವ ಕಾರಣ ಹೆಸರನ್ನು ಬಹಿರಂಗಪಡಿಸಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.(ಏಜೆನ್ಸೀಸ್)