ನ್ಯೂಸ್

ತನ್ನ ಟಿಕ್​ಟಾಕ್​ ವಿಡಿಯೋಕ್ಕೆ ಹೆಚ್ಚಿನ ಲೈಕ್ಸ್​ ಬರಲಿಲ್ಲ ಎಂದು ಬಾಲಕ ಹೀಗೆ ಮಾಡಿಕೊಳ್ಳುವುದೇ...? ಆತ ಮಾಡಿಕೊಂಡ ಅನಾಹುತ ಏನು?

ನವದೆಹಲಿ: ಟಿಕ್​ಟಾಕ್​ ಜಾಲತಾಣದಲ್ಲಿ ತಾನು ಹಾಕಿದ್ದ ವಿಡಿಯೋಕ್ಕೆ ಹೆಚ್ಚಿನ ಲೈಕ್ಸ್​ ಬರಲಿಲ್ಲ ಎಂಬ ಕಾರಣಕ್ಕೆ ಉತ್ತರ ಪ್ರದೇಶದ ನೋಯ್ಡಾದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಲಾರ್​ಪುರ ಗ್ರಾಮದ ನೂರ್​ ಇಕ್ಬಾಲ್​ (18) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವ.

ನೂರ್​ ಇಕ್ಬಾಲ್​ಗೆ ಮೊದಲಿನಿಂದಲೂ ಟಿಕ್​ಟಾಕ್​ ಜಾಲತಾಣದಲ್ಲಿ ವಿಡಿಯೋಗಳನ್ನು ಅಪ್​ಲೋಡ್​ ಮಾಡುವ ಹವ್ಯಾಸ ಇತ್ತು. ಆದರೆ ಆ ವಿಡಿಯೋಗಳನ್ನು ನೋಡಿ, ಹೆಚ್ಚಿನ ಜನರು ಲೈಕ್​ ಕೊಡುತ್ತಿರಲಿಲ್ಲ. ಇದರಿಂದ ಆತ ಖಿನ್ನತೆಗೆ ಒಳಗಾಗಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಟಿಕ್​ಟಾಕ್​ನಲ್ಲಿ ವಿಡಿಯೋ ಹಾಕುತ್ತಿದ್ದಂತೆ ತನ್ನ ನೆರೆಹೊರೆಯವರಿಗೆಲ್ಲ ಕರೆ ಮಾಡುತ್ತಿದ್ದ ನೂರ್​ ಇಕ್ಬಾಲ್​, ವಿಡಿಯೋವನ್ನು ಲೈಕ್​ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದ. ಆತ ಸನ್ನಡತೆ ಹೊಂದಿದ್ದ ಎಂದು ಅಕ್ಕಪಕ್ಕದ ಮನೆಯವರು ಮಾಹಿತಿ ನೀಡಿದ್ದಾಗಿ ಹೇಳಿದ್ದಾರೆ.