ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿ (ವಿವಿಸಿಇ)ನಿಂದ ಆಯೋಜಿಸಿದ್ದ ಪ್ರಥಮ ವರ್ಷದ ಬಿ.ಇ. ವಿದ್ಯಾರ್ಥಿಗಳ 2026-27ನೇ ಸಾಲಿನ ಶೈಕ್ಷಣಿಕ ಸಾಲಿನ ಆರಂಭಿಕ ಕಾರ್ಯಕ್ರಮವನ್ನು ಟಿ.ಜಿ.ಸೀತಾರಾಮ್ ಉದ್ಘಾಟಿಸಿದರು. ಪಿ.ವಿಶ್ವನಾಥ್, ಗುಂಡಪ್ಪಗೌಡ, ಶ್ರೀಶೈಲ ರಾಮಣ್ಣನವರ್, ಡಾ. ಬಿ.ಸದಾಶಿವೇಗೌಡ, ಶೋಭಾ ಶಂಕರ್ ಇತರರು ಇದ್ದರು.
- ಭಾರತವು ಸ್ವಂತ ಉತ್ಪನ್ನ ತಯಾರಿಸುವ ದೇಶವಾಗದ ಹೊರತು, ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಾಧ್ಯವಿಲ್ಲ
- ಇಂಜಿನಿಯರಿಂಗ್ ಎಂದರೆ ಬರಿ ಪದವಿಯಲ್ಲ, ಅದು ಜಗತ್ತನ್ನು ನೋಡುವ ಒಂದು ವಿಶಿಷ್ಟ ದೃಷ್ಟಿಕೋನ
ಮೈಸೂರು:ಭಾರತವನ್ನು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಯುವ ತಾಂತ್ರಿಕ ಶಕ್ತಿ ಮುಖ್ಯ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಮಾಜಿ ಅಧ್ಯಕ್ಷ ಟಿ.ಜಿ.ಸೀತಾರಾಮ್ ಹೇಳಿದರು.
ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿ(ವಿವಿಸಿಇ)ನಿಂದ ಎಚ್.ಕೆಂಪೇಗೌಡ ಕ್ರೀಡಾ ಸಂಕೀರ್ಣದಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ಬಿ.ಇ. ವಿದ್ಯಾರ್ಥಿಗಳ 2026-27ನೇ ಸಾಲಿನ ಶೈಕ್ಷಣಿಕ ಸಾಲಿನ ಆರಂಭಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತವು ಸ್ವಂತ ಉತ್ಪನ್ನ ತಯಾರಿಸುವ ದೇಶವಾಗದ ಹೊರತು, ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಯುವ ತಾಂತ್ರಿಕ ಶಕ್ತಿ ಮುಖ್ಯ ಎಂದು ಹೇಳಿದರು.
ವಿದ್ಯಾರ್ಥಿಗಳು ಗಿಳಿಪಾಠ ಬಿಟ್ಟು ಗಣಿತ, ಭೌತಶಾಸ್ತ್ರ ಹಾಗೂ ಮೂಲ ವಿಜ್ಞಾನ ವಿಷಯಗಳಲ್ಲಿ ಬಲವಾದ ಅಡಿಪಾಯ ಮತ್ತು ಸ್ಪಷ್ಟ ಕಲ್ಪನೆ ಬೆಳೆಸಿಕೊಳ್ಳಬೇಕು. ಇಂಜಿನಿಯರಿಂಗ್ ಎಂದರೆ ಬರಿ ಪದವಿಯಲ್ಲ, ಅದು ಜಗತ್ತನ್ನು ನೋಡುವ ಒಂದು ವಿಶಿಷ್ಟ ದೃಷ್ಟಿಕೋನ. ಸಮಸ್ಯೆಗಳನ್ನು ಗುರುತಿಸಿ, ತಾರ್ಕಿಕವಾಗಿ ಆಲೋಚಿಸಿ ಪ್ರಾಯೋಗಿಕ ಪರಿಹಾರ ಕಂಡುಕೊಳ್ಳುವ ಕೌಶಲ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ದಿನದಿಂದ ದಿನಕ್ಕೆ ಅವಿಷ್ಕಾರಗೊಳ್ಳುತ್ತಿರುವ ಉದಯೋನ್ಮುಖ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಕೃತಕ ಬುದ್ಧಿಮತ್ತೆ (ಎಐ) ಮತ್ತು ಡೇಟಾ ಸೈನ್ಸ್ ಮುಂತಾದ ಡಿಜಿಟಲ್ ಉಪಕರಣಗಳು ಮೂಲ ಇಂಜಿನಿಯರಿಂಗ್ ಜ್ಞಾನಕ್ಕೆ ಪೂರಕವಾಗಿರಬೇಕೇ ಹೊರತು, ಅವು ಮೂಲ ವಿಷಯಗಳ ಜಾಗವನ್ನು ಆಕ್ರಮಿಸಬಾರದು. ಎಐ ಎನ್ನುವುದು ಮಾನವನ ಸಾಮರ್ಥ್ಯವನ್ನು ಹೆಚ್ಚಿಸುವ ಸಾಧನವನ್ನಾಗಿ ಮಾಡಿಕೊಳ್ಳಬೇಕು ಎಂದರು.
ಪರೀಕ್ಷೆ, ಪ್ರಾಜೆಕ್ಟ್ ಅಥವಾ ಉದ್ಯೋಗದ ಅವಕಾಶಗಳಲ್ಲಿ ಎದುರಾಗುವ ಸೋಲುಗಳನ್ನು ಕಲಿಕೆಯ ಮೆಟ್ಟಿಲುಗಳಾಗಿ ನೋಡಬೇಕು. ಯುವಜನರಲ್ಲಿ ಸೋಲಿನ ಭಯವನ್ನು ದೂರ ಮಾಡಬೇಕು ಎಂದು ಹೇಳಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಬೆಳವಣಿಗೆ ಸಾಧಿಸಿದೆ. ಸಂಶೋಧನೆ, ಸ್ಟಾರ್ಟ್‌ಅಪ್‌ಗಳು, ಡಿಜಿಟಲ್ ಮೂಲಸೌಕರ್ಯ, ಸೆಮಿಕಂಡಕ್ಟರ್ ಹಾಗೂ ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ದೇಶ ಸಾಧನೆ ಮಾಡಿದೆ. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳು ಕ್ವಾಂಟಮ್ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನದಂತಹ ಹೊಸ ಕ್ಷೇತ್ರಗಳನ್ನು ಅನ್ವೇಷಿಸಬೇಕು ಎಂದರು.
ಶಿಕ್ಷಣ ಎನ್ನುವುದು ಕೇವಲ ಪದವಿಯೊಂದಿಗೆ ಮುಗಿಯುವುದಿಲ್ಲ. ವಿದ್ಯಾರ್ಥಿಗಳು ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಹ್ಯಾಕಥಾನ್, ನಾವೀನ್ಯತಾ ಕ್ಲಬ್‌ಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇದರಿಂದ ಪ್ರಾಯೋಗಿಕ ಜ್ಞಾನ ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದರು.
ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್ ಮಾತನಾಡಿ, ಸಂಸ್ಥೆಯು ತಾಂತ್ರಿಕ ಕೌಶಲ, ಮೌಲ್ಯಗಳು ಮತ್ತು ನಾಯಕತ್ವ ಗುಣಗಳನ್ನು ಒಳಗೊಂಡ ಸಮಗ್ರ ಶಿಕ್ಷಣಕ್ಕೆ ನೀಡುತ್ತಿರುವ ಆದ್ಯತೆಯನ್ನು ನೀಡುತ್ತಿದೆ ಎಂದು ಸಂಸ್ಥೆ ಕುರಿತು ವಿವರಿಸಿದರು.
ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಸದಾಶಿವೇಗೌಡ ಕಾಲೇಜಿನ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಹಳೆಯ ವಿದ್ಯಾರ್ಥಿಗಳಾದ ಆರ್.ಕಾರ್ತಿಕ್, ಆರ್. ಪ್ರೀತಿ, ದರ್ಶಿತ್ ಜೈನ್ ತಮ್ಮ ಅನುಭವಗಳನ್ನು ಹಂಚಿಕೊಂಡರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಖಜಾಂಚಿ ಶ್ರೀಶೈಲ ರಾಮಣ್ಣನವರ್, ಉಪ ಪ್ರಾಂಶುಪಾಲೆ ಶೋಭಾಶಂಕರ್ ಇತರರು ಇದ್ದರು.