Corporate Life 
ನ್ಯೂಸ್

Corporate Life: ಬರೋಬ್ಬರಿ 72 ಲಕ್ಷ ರೂ. ಪ್ಯಾಕೇಜ್‌ನ ಐಟಿ ಕೆಲಸವನ್ನು ಬೇಡವೆಂದ ಟೆಕ್ಕಿ! ವೈರಲ್ ಪೋಸ್ಟ್

ಬೆಂಗಳೂರು: ಇಂದಿನ ದಿನಗಳಲ್ಲಿ ಸಾಫ್ಟ್‌ವೇರ್(Corporate Life) ಕಂಪನಿಯೊಂದರಲ್ಲಿ ಕೈತುಂಬಾ ಸಂಬಳ ಸಿಗುವ ಕೆಲಸ ಗಿಟ್ಟಿಸಿಕೊಳ್ಳುವುದೇ ದೊಡ್ಡ ಸಾಹಸ. ಇಂತಹ ಪರಿಸ್ಥಿತಿಯಲ್ಲಿ ವಾರ್ಷಿಕ 72 ಲಕ್ಷ ರೂಪಾಯಿ ಬಂಪರ್ ಆಫರ್ ಸಿಕ್ಕರೆ ಯಾರಾದರೂ ಬೇಡ ಅಂತಾರಾ? ಖಂಡಿತ ಇಲ್ಲ, ತಕ್ಷಣವೇ ಒಪ್ಪಿಕೊಂಡು ಸಂಭ್ರಮಿಸುತ್ತಾರೆ. ಆದರೆ, ಇಲ್ಲೊಬ್ಬ ಟೆಕ್ಕಿ ತನಗೆ ಬಂದ 72 ಲಕ್ಷದ ಬೃಹತ್ ಆಫರ್ ಅನ್ನು ಮುಖ ನೋಡದೆಯೇ ತಿರಸ್ಕರಿಸಿದ್ದಾರೆ! ಇದಕ್ಕೆ ಕಾರಣ ಕೇಳಿದರೆ ನೀವು ನಿಜಕ್ಕೂ ಆಶ್ಚರ್ಯ ಪಡುತ್ತೀರಿ.

ವೈರಲ್ ಆದ ರಾಗಿಣಿ ಪಾಂಡೆ ಅವರ ಪೋಸ್ಟ್!

ಎಕ್ಸ್ (ಟ್ವಿಟರ್) ಬಳಕೆದಾರರಾದ ರಾಗಿಣಿ ಪಾಂಡೆ ಎಂಬುವವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್ ಒಂದು ಈಗ ಐಟಿ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. "ನನ್ನ ಸ್ನೇಹಿತನಿಗೆ 72 ಲಕ್ಷ ರೂ. ಪ್ಯಾಕೇಜ್‌ನ ಐಟಿ ಆಫರ್ ಬಂದಿತ್ತು. ಆದರೆ ಆತ ಅದನ್ನು ರಿಜೆಕ್ಟ್ ಮಾಡಿದ್ದಾನೆ. ಆಶ್ಚರ್ಯ ಎಂದರೆ ಆಫರ್ ಕೈಬಿಟ್ಟಿದ್ದಕ್ಕೆ ಆತನಿಗೆ ಯಾವುದೇ ವಿಷಾದವಿಲ್ಲ! ಇತ್ತೀಚಿನ ದಿನಗಳಲ್ಲಿ ಜನರ ಆದ್ಯತೆಗಳು ಬದಲಾಗುತ್ತಿವೆ ಭಾಯ್, ಹಣ ಒಂದೇ ಎಲ್ಲವೂ ಅಲ್ಲ ಎಂಬುದು ಸಾಬೀತಾಗುತ್ತಿದೆ" ಎಂದು ರಾಗಿಣಿ ಬರೆದುಕೊಂಡಿದ್ದಾರೆ.

ಕೆಲಸ ನಿರಾಕರಿಸಲು ಆ ಮೂರು 'ರೆಡ್ ಫ್ಲ್ಯಾಗ್ಸ್' ಕಾರಣ!

ಅಷ್ಟಕ್ಕೂ ಆ ಟೆಕ್ಕಿ ಇಷ್ಟೊಂದು ದೊಡ್ಡ ಸಂಬಳದ ಕೆಲಸವನ್ನು ಬೇಡ ಅನ್ನಲು ಕಂಪನಿ ವಿಧಿಸಿದ್ದ ಮೂರು ಕಠಿಣ ಷರತ್ತುಗಳೇ ಕಾರಣ.
ವಾರದಲ್ಲಿ 5 ದಿನ ಕಡ್ಡಾಯ ಆಫೀಸ್ ಕೆಲಸ (Strict WFO): ಮನೆಯಿಂದ ಕೆಲಸ ಮಾಡಲು (WFH) ಯಾವುದೇ ಅವಕಾಶವಿರಲಿಲ್ಲ.
ರಜೆ ನೀತಿಯೇ ಇರಲಿಲ್ಲ (No Leave Policy): ತುರ್ತು ಸಂದರ್ಭಗಳಲ್ಲೂ ರಜೆ ಸಿಗುವುದು ಕಷ್ಟವಾಗಿತ್ತು.
ಸ್ಥಳಾಂತರಕ್ಕೆ ಯಾವುದೇ ಬೆಂಬಲವಿರಲಿಲ್ಲ (Zero Relocation Support): ಬೇರೆ ನಗರಕ್ಕೆ ಶಿಫ್ಟ್ ಆಗಲು ಕಂಪನಿ ಯಾವುದೇ ಭತ್ಯೆ ನೀಡುತ್ತಿರಲಿಲ್ಲ.
ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ (Work-Life Balance) ಇಲ್ಲದ ಇಂತಹ ವಿಷಕಾರಿ ಕಾರ್ಪೊರೇಟ್ ಸಂಸ್ಕೃತಿಯಲ್ಲಿ ಬದುಕುವುದಕ್ಕಿಂತ ನೆಮ್ಮದಿ ಮುಖ್ಯ ಎಂದು ಆ ಟೆಕ್ಕಿ ನಿರ್ಧರಿಸಿದ್ದಾರೆ.

ನೆಟ್ಟಿಗರ ಸಮ್ಮತಿ ಮತ್ತು ಕೋಟಿ ಸಂಬಳದವರ ಗೋಳು!

ಈ ಪೋಸ್ಟ್‌ಗೆ ಐಟಿ ಉದ್ಯೋಗಿಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಒಬ್ಬ ಬಳಕೆದಾರರು ಕಮೆಂಟ್ ಮಾಡಿ, "72 ಲಕ್ಷ ಸಂಬಳ ಎಂದರೆ ಇಬ್ಬರು ಉದ್ಯೋಗಿಗಳ ಕೆಲಸವನ್ನು ಒಬ್ಬನಿಂದಲೇ ಮಾಡಿಸಿಕೊಳ್ಳುವುದು ಎಂದರ್ಥ. ವಾರದಲ್ಲಿ 6 ದಿನ, ದಿನಕ್ಕೆ 16 ಗಂಟೆ ಕೆಲಸ ಮಾಡಿ ಆರೋಗ್ಯ ಹಾಳಾದರೆ ಆ ಹಣದಿಂದ ಏನು ಪ್ರಯೋಜನ?" ಎಂದು ಪ್ರಶ್ನಿಸಿದ್ದಾರೆ.
ಇನ್ನೊಬ್ಬ ಉದ್ಯೋಗಿ ತಮಗಿರುವ ಕೋಟಿ ಸಂಬಳದ ಗೋಳನ್ನು ತೋಡಿಕೊಂಡಿದ್ದು, "ನನಗೆ ವಾರ್ಷಿಕ 1.1 ಕೋಟಿ ರೂಪಾಯಿ ಸಂಬಳ ಸಿಗುತ್ತಿದೆ. ಆದರೆ ನಾನು 24 ಗಂಟೆಯೂ ಫೋನ್ ಕಾಲ್ಸ್‌ ಅಟೆಂಡ್ ಮಾಡಬೇಕು. ಇದರಿಂದ ನನ್ನ ಮಾನಸಿಕ ನೆಮ್ಮದಿ ಹಾಳಾಗಿದ್ದು, ಸದಾ ಕಿರಿಕಿರಿ ಉಂಟಾಗುತ್ತಿದೆ" ಎಂದು ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಂಶಯ!

ಕಾರ್ಪೊರೇಟ್ ಜಗತ್ತಿನಲ್ಲಿ ನೆಮ್ಮದಿಯೇ ಹೊಸ ಐಷಾರಾಮಿ (Luxury) ವಸ್ತುವಾಗಿದೆ ಎಂದು ಹಲವರು ಒಪ್ಪಿಕೊಂಡರೆ, ಕೆಲವರು ಈ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೇವಲ ಲೈಕ್ಸ್ ಮತ್ತು ವ್ಯೂಸ್ ಪಡೆಯಲು (Engagement Farming) ಇಂತಹ ಕಾಲ್ಪನಿಕ ಕಥೆಗಳನ್ನು ಸೃಷ್ಟಿಸಲಾಗುತ್ತಿದೆ. ಕಂಪನಿಗಳು ಇಷ್ಟು ದೊಡ್ಡ ಆಫರ್‌ಗಳನ್ನು ವಾಟ್ಸಾಪ್‌ನಲ್ಲಿ ನೀಡುವುದಿಲ್ಲ, ಜನರನ್ನು ಮೂರ್ಖರನ್ನಾಗಿಸಬೇಡಿ ಎಂದು ಕೆಲವರು ನೆಗೆಟಿವ್ ಕಮೆಂಟ್ ಕೂಡ ಮಾಡಿದ್ದಾರೆ. ಏನೇ ಇರಲಿ, ಇಂದಿನ ಯುವ ಪೀಳಿಗೆಗೆ ದುಡ್ಡಿಗಿಂತ ಮಾನಸಿಕ ಆರೋಗ್ಯ ಮುಖ್ಯವಾಗುತ್ತಿರುವುದಂತೂ ಸತ್ಯ,(ಏಜೆನ್ಸೀಸ್​).