ನ್ಯೂಸ್

386 ಶಿಕ್ಷಕರಿಗೆ ಕೋರಿಕೆ ವರ್ಗಾವಣೆ: ಮೊದಲ ಹಂತದ ವರ್ಗಾವಣೆ ಕೌನ್ಸೆಲಿಂಗ್ ಸುಸೂತ್ರ

Tumakuru

ತುಮಕೂರು: ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ ಸುಸೂತ್ರವಾಗಿ ನಡೆಯಿತು.

ನ.29ರಂದು ಆರಂಭವಾದ ಮೊದಲನೇ ಹಂತದ ಕೌನ್ಸೆಲಿಂಗ್ ಪ್ರಕ್ರಿಯೆಗೆ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಹಕಾರ ನೀಡಿದ್ದು ಪಾರದರ್ಶಕವಾಗಿ ವರ್ಗಾವಣೆ ಪ್ರಕ್ರಿಯೆ ನಡೆಯಿತು.

ಜಿಲ್ಲೆಯ 1238 ಶಿಕ್ಷಕರು ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ನ.29 ರಂದು 300, ನ.30ರಂದು 400ಕ್ಕೂ ಹೆಚ್ಚು ಹಾಗೂ ಬುಧವಾರ (ಡಿ.1)ದಂದು ಉಳಿದ 538 ಶಿಕ್ಷಕರು ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. 386 ಶಿಕ್ಷಕರಿಗೆ ಕೋರಿಕೆ ವರ್ಗಾವಣೆಯಲ್ಲಿ ಅಪೇಕ್ಷಿಸಿದ ಸ್ಥಳಕ್ಕೆ ವರ್ಗಾವಣೆ ಆದೇಶವನ್ನು ಸ್ಥಳದಲ್ಲಿಯೇ ನೀಡಲಾಯಿತು ಎಂದು ಡಿಡಿಪಿಐ ಸಿ.ನಂಜಯ್ಯ ತಿಳಿಸಿದರು.

ಯಾವುದೇ ಗೊಂದಲವಿಲ್ಲದಂತೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಯಿತು. ಶಿಕ್ಷಕರ ಸಂಘದ ಸಹಕಾರದಿಂದ ಪ್ರಾಥಮಿಕ ಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡಿದೆ. ಪ್ರೌಢಶಾಲಾ ಶಿಕ್ಷಕರು, ನಿರ್ದಿಷ್ಟ ಹುದ್ದೆ, ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳಿಗೆ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. ಇದುವರೆಗೂ ಯಾವುದೇ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಪರಶಿವಮೂರ್ತಿ ಮಾತನಾಡಿ, ಕೌನ್ಸೆಲಿಂಗ್‌ಪ್ರಕ್ರಿಯೆಯಲ್ಲಿ ಭಾಗವಹಿಸುವ ಶಿಕ್ಷಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಆಸನ, ಶಾಮಿಯಾನ ವ್ಯವಸ್ಥೆಯನ್ನು ಸಂಘದ ವತಿಯಿಂದ ಕಲ್ಪಿಸಲಾಗಿತ್ತು. ಶಿಕ್ಷಕರಿಗೆ ಮಧ್ಯಾಹ್ನದ ಊಟವನ್ನು ಸಂಘದಿಂದಲೇ ನೀಡಲಾಯಿತು. ಶಿಕ್ಷಕರಿಗೆ ಕೌನ್ಸೆಲಿಂಗ್‌ನಲ್ಲಿ ಯಾವುದೇ ಗೊಂದಲವಾಗದಂತೆ ವರ್ಗಾವಣೆ ಪಡೆಯಲು ಸಂಘದ ವತಿಯಿಂದ ಮಾರ್ಗದರ್ಶನ ಸಹ ಮಾಡಲಾಯಿತು ಎಂದು ತಿಳಿಸಿದರು.

ಈ ಬಾರಿಯ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಯಾವುದೇ ತಾಂತ್ರಿಕ ಸಮಸ್ಯೆಗಳಿಲ್ಲದೆ ಸುಸೂತ್ರವಾಗಿ, ವ್ಯವಸ್ಥಿತವಾಗಿ ನಡೆಯಿತು. ಪ್ರಕ್ರಿಯೆ ಪಾರದರ್ಶಕವಾಗಿದ್ದರಿಂದ ಶಿಕ್ಷಕರು ಕೂಡ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು ಕೋರಿಕೆ ವರ್ಗಾವಣೆ ಸ್ಥಳ ಆಯ್ಕೆ ಮಾಡಿಕೊಂಡಿರುವರಿಗೆ ವರ್ಗಾವಣೆ ಆದೇಶ ಪತ್ರ ಕೊಡಲಾಗಿದೆ. 2ನೇ ಹಂತದ ಕೌನ್ಸಿಲಿಂಗ್ ಪ್ರಕ್ರಿಯೆ ಶೀಘ್ರ ಆರಂಭಿಸಲಾಗುವುದು. ಸಿ.ನಂಜಯ್ಯ ಡಿಡಿಪಿಐ