ನ್ಯೂಸ್

ಶಿಕ್ಷಕರು ವಿದ್ಯಾರ್ಥಿಗಳ ದೌರ್ಬಲ್ಯ-ಸಾಮರ್ಥ್ಯ ಗುರುತಿಸಬೇಕು

ಮೈಸೂರು: ನಮ್ಮ ದೌರ್ಬಲ್ಯಗಳನ್ನು ಮೊದಲೇ ಗುರುತಿಸಿಕೊಳ್ಳುವ ಪ್ರಯತ್ನ ಮಾಡಿದರೆ ಸದೃಢವಾದ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. ಹಾಗಾಗಿ ವಿದ್ಯಾರ್ಥಿಗಳ ದೌರ್ಬಲ್ಯ ಹಾಗೂ ಸಾಮರ್ಥ್ಯವನ್ನು ಗುರುತಿಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು ಎಂದು ಕೊಡಗು ವಿಶ್ವ ವಿದ್ಯಾಲಯ ಕುಲಪತಿ ಪ್ರೊ.ಅಶೋಕ್ ಎನ್. ಆಲೂರ್ ಹೇಳಿದರು.

ಮೈಸೂರು ವಿಶ್ವ ವಿದ್ಯಾಲಯದ ಮಾನವ ಅಭಿವೃದ್ಧಿ ಮತ್ತು ಕುಟುಂಬ ಅಧ್ಯಯನ ವಿಭಾಗ, ಆಹಾರ ವಿಜ್ಞಾನ ಮತ್ತು ಪೋಷಣೆ ಅಧ್ಯಯನ ವಿಭಾಗ ವತಿಯಿಂದ ನಗರದ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಗುರುವಾರ ‘ಶಾಲೆಯಲ್ಲಿ ಬೆದರುವಿಕೆ ಎದುರಿಸಲು ಜೀವನ ಕೌಶಲ್ಯ’ ವಿಷಯದ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪಾಲಕರು ಹಾಗೂ ಶಿಕ್ಷಕರ ಸಹಕಾರ ಪಡೆದು ಮುಂದೆ ನೀವು ಏನಾಗಬೇಕು ಎಂಬ ಗುರಿಯನ್ನು ವಿದ್ಯಾರ್ಥಿಗಳು ಈಗಲೇ ನಿಗದಿ ಮಾಡಿಕೊಳ್ಳಬೇಕು. ನಿಮ್ಮ ಗುರಿ ನಿಗದಿ ಪಡಿಸುವ ವಿಚಾರವನ್ನು ಮುಂದೂಡುವುದು ಸರಿಯಲ್ಲ. ನೀವು ವೈದ್ಯಕೀಯ, ಇಂಜಿನಿಯರಿಂಗ್, ಶಿಕ್ಷಣ, ಆಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಬೇಕು ಎಂಬ ಗುರಿಯನ್ನು ಈಗಲೇ ಇಟ್ಟುಕೊಳ್ಳಿ. ಆ ಕ್ಷೇತ್ರದ ಕಡೆಗೆ ತೆರಳಲು ಇಂದಿನಿಂದಲೇ ಪರಿಶ್ರಮ ಪಡಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.