ಬೆಂಗಳೂರು: ಅನುದಾನಿತ ಶಾಲಾ ಶಿಕ್ಷಕರು ಸುಮಾರು 140 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ ಬೇಸತ್ತು ವಿಷ ಕುಡಿದ ಶಿಕ್ಷಕರ ಪೈಕಿ ಒಬ್ಬರು ಸಾವಿಗೀಡಾಗಿದ್ದು, ಇನ್ನೊಬ್ಬರು ತೀವ್ರ ಅಸ್ವಸ್ಥಗೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ನಿವೃತ್ತ ಶಿಕ್ಷಕ ಸಿದ್ದಯ್ಯ ಹಿರೇಮಠ (65) ಸಾವಿಗೀಡಾದವರು. ವಿಷ ಕುಡಿದು ತೀವ್ರ ಅಸ್ವಸ್ಥಗೊಂಡು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಇವರು ಇಂದು ರಾತ್ರಿ ಕೊನೆಯುಸಿರೆಳೆದರು. ನೆಲಮಂಗಲದ ಶಿಕ್ಷಕ ವೆಂಕಟರಾಜು ಪರಿಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಅನುದಾನಿತ ಶಾಲಾ ಶಿಕ್ಷಕರು ಪಿಂಚಣಿಗಾಗಿ ಕಳೆದ 141 ದಿನಗಳಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ ಎನ್ನಲಾಗಿದೆ. ಇದರಿಂದ ಬೇಸತ್ತ ಶಿಕ್ಷಕರಿಬ್ಬರು ನಿನ್ನೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು. ತೀವ್ರ ಅಸ್ವಸ್ಥಗೊಂಡ ಸಿದ್ದಯ್ಯ ಹಿರೇಮಠ ಹಾಗೂ ವೆಂಕಟರಾಜುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.