ನ್ಯೂಸ್

ಸಾಧನೆ ಮಾಡಲು ಶಿಕ್ಷಕರ ಮಾರ್ಗದರ್ಶನ ಅಗತ್ಯ; ಪಿ. ಮುನಿಯಪ್ಪ

Haveri - Kariyappa Aralikatti

ರಾಣೆಬೆನ್ನೂರ: ಪ್ರತಿಯೊಬ್ಬರು ಜೀವನದಲ್ಲಿ ಸಾಧನೆ ಮಾಡಲು ಶಿಕ್ಷಕರ ಸಲಹೆ ಹಾಗೂ ಮಾರ್ಗದರ್ಶನ ಅತ್ಯಗತ್ಯ ಎಂದು ಪ್ರಾಚಾರ್ಯ ಪಿ. ಮುನಿಯಪ್ಪ ಹೇಳಿದರು.
ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಶ್ರೀ ಸದ್ಗುರು ಶಿವಾನಂದ ಸಯುಕ್ತ ಪದವಿ ಪೂರ್ವ ಕಾಲೇಜ್‌ನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಮಗೆ ಅಕ್ಷರ ಕಲಿಸಿ, ಬದುಕಿಗೆ ಮಾರ್ಗದರ್ಶನ ನೀಡಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಕಾರಣರಾದ ಗುರುಗಳನ್ನು ಸ್ಮರಿಸಿಕೊಳ್ಳಲು ಈ ದಿನ ಪ್ರಮುಖವಾಗಿದೆ. ಶಿಕ್ಷಣ ನೀಡುವ ಮೂಲಕ ದೇಶದ ಭದ್ರತೆ, ಅಭಿವೃದ್ಧಿಗೆ ಶಿಕ್ಷಕರು, ವಿದ್ಯಾರ್ಥಿಗಳಿಗೆ ಗುರಿ ಮುಟ್ಟಿಸಲು, ಕತ್ತಲೆಯಿಂದ ಬೆಳಕಿನಡೆ ಕೊಂಡೋಯ್ಯುತ್ತಾರೆ ಎಂದರು.
ಎನ್‌ಎಸ್‌ಎಸ್ ಯೋಜನಾಧಿಕಾರಿ ಎಚ್. ಶಿವಾನಂದ ಮಾತನಾಡಿ, ಮನೆಯೇ ಮೊದಲ ಶಾಲೆ ಎಂಬಂತೆ ತಾಯಿ ಮೊದಲ ಗುರುವಾದರೆ, ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುತ್ತಾರೆ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕರಾಗಿ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಶ್ರಮಿಸಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಜವಾಬ್ದಾರಿಯುತ ಪ್ರಜೆಯನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಇಂತಹ ಮಹನೀಯರನ್ನು ನೆನೆಯುವುದು ನಮ್ಮ ಆದ್ಯ ಕರ್ತವ್ಯ ಎಂದರು.
ಉಪನ್ಯಾಸಕರಾದ ರೇವಣ್ಣ ನಾಯಕ, ಸಂತೋಷ ಅಂಗಡಿ, ರೇಣುಕಾ ಗಳಗನಾಥ, ಶಿಲ್ಪಾ ಕೆಂಚರೆಡ್ಡಿ, ಪೂರ್ಣಿಮಾ ಮಾಗನೂರ, ಪ್ರವೀಣ ಆರ್., ಜಗದೀಶ ಕುಮಾರ ಮತ್ತಿತರರು ಉಪಸ್ಥಿತರಿದ್ದರು.