ಜಿಗಣೇಹಳ್ಳಿ ನೇತಾಜಿ ಸುಭಾಷ್ ಚಂದ್ರಬೋಸ್ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ಜೀಗಣೇಹಳ್ಳಿ ನೀಲಕಂಠಪ್ಪ, ಟಿ.ರಂಗಸ್ವಾಮಿ, ಕೆಂಚಪ್ಪ, ವಿದ್ಯಾರ್ಥಿಗಳು ಇದ್ದರು. 
ನ್ಯೂಸ್

ದಾಖಲಾತಿ ಹೆಚ್ಚಾಗಲು ಶಿಕ್ಷಕರೇ ಕಾರಣ

ಕಡೂರು: ವಿದ್ಯಾರ್ಥಿಯನ್ನು ಸತ್ಪ್ರಜೆಯನ್ನಾಗಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು. ಅವರ ಪರಿಶ್ರಮದಿಂದಲೇ ಗ್ರಾಮದ ಶಾಲೆಗೆ ಅತ್ಯುತ್ತಮ ಶಾಲೆ ಪ್ರಶಸ್ತಿ ಲಭಿಸಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಅಭಿಪ್ರಾಯಪಟ್ಟರು.
ಜಿಗಣೇಹಳ್ಳಿ ನೇತಾಜಿ ಸುಭಾಷ್‌ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆಗೆ ಜಿಲ್ಲಾ ಪಂಚಾಯಿತಿ ಪ್ರಶಸ್ತಿ ದೊರೆತ ಹಿನ್ನ್ನೆಲೆಯಲ್ಲಿ ಹಳೇ ವಿದ್ಯಾರ್ಥಿಗಳ ಸಂಘ ಮತ್ತು ಗ್ರಾಮಸ್ಥರು ಶಿಕ್ಷಕರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮದಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸಬೇಕಾದರೆ ಶಾಲೆ ಪಾತ್ರ ಗಮನಾರ್ಹ. ನಮ್ಮ ಸುತ್ತಮುತ್ತಲಿನ ಭಾಗದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ದಾಖಲಾಗುವಲ್ಲಿ ಶಿಕ್ಷಕರ ಶ್ರಮ ಹೆಚ್ಚಿನದ್ದಾಗಿದೆ. ಗುಣಮಟ್ಟದ ಶಿಕ್ಷಣ ದೊರಕಿರುವುದರಿಂದ ಫಲಿತಾಂಶದಲ್ಲಿ ಸಾಧನೆ ಮಾಡಲಾಗುತ್ತಿದೆ. ಇಲ್ಲಿ ವ್ಯಾಸಂಗ ಮಾಡಿರುವ ಅನೇಕ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದರು.
ಮುಖ್ಯಶಿಕ್ಷಕ ಎ.ಜಿ.ರಾಜಶೇಖರ್ ಮಾತನಾಡಿ, ಪಠ್ಯೇತರ ಚಟುವಟಿಕೆಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. 5 ವರ್ಷದಿಂದ 10ನೇ ತರಗತಿ ಫಲಿತಾಂಶ ಶೇ.100 ಲಭಿಸುತ್ತಿದೆ. ಮೂರು ವರ್ಷಗಳಿಂದ ಬೀರೂರು ಶೈಕ್ಷಣಿಕ ವಲಯದ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುತ್ತಿದ್ದೇವೆ. ಕಲಿಕೆಗೆ ಪೂರಕವಾದ ವಾತಾವರಣ, ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಕರ ಪ್ರೋತ್ಸಾಹದೊಂದಿಗೆ ಶಾಲಾ ಪರಿಸರವನ್ನು ಸ್ವಚ್ಛವಾಗಿರಿಸಲಾಗಿದೆ ಎಂದು ತಿಳಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಕೆಂಚಪ್ಪ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಟಿ.ರಂಗಸ್ವಾಮಿ, ಶಿಕ್ಷಕರಾದ ಜಿ.ಆರ್.ಪ್ರಮೀಳಾ, ಆರ್.ಎಲ್. ವನಿತಾ, ಪಿ.ಶ್ರೀನಿವಾಸ್, ಕೆ.ಜೆ.ಕಿರಣ್, ಜಿ.ಎಚ್.ತ್ರಿವೇಣಿ, ಬಿ.ಸಿ.ಶಿವಕುಮಾರ್ ಇತರರಿದ್ದರು.