ನ್ಯೂಸ್

ಶಿಕ್ಷಕರಿಗೆ ಸಂಬಳ ನೀಡದೆ ದೌರ್ಜನ್ಯ

ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಲು ಅವಕಾಶ ನೀಡದೆ ತೊಂದರೆ

ಅರಸೀಕೆರೆ(ಗ್ರಾಮಾಂತರ) : ಅನುದಾನಿತ ಶಾಲೆಯ ಪ್ರಯೋಗಶಾಲೆ ಸಹ ಶಿಕ್ಷಕರೊಬ್ಬರಿಗೆ ಐದು ತಿಂಗಳಿನಿಂದ ಸಂಬಳ ನೀಡದೆ ಶಾಲಾ ಆಡಳಿತ ಮಂಡಳಿ ಸತಾಯಿಸುವ ಮೂಲಕ ದೌರ್ಜನ್ಯವೆಸಗಿರುವ ಬಗ್ಗೆ ಆರೋಪ ಕೇಳಿಬಂದಿದೆ.

ತಾಲೂಕಿನ ತಳಲೂರು ಗ್ರಾಮದ ಅನುದಾನಿತ ಶಾಲೆ ಶ್ರೀ ಚಿತ್ರಲಿಂಗೇಶ್ವರ ಪ್ರೌಢ ಶಾಲೆಯಲ್ಲಿ 30 ವರ್ಷಗಳಿಂದ ಕಾರ್ಯ ನಿರ್ವಹಿಸಿಕೊಂಡು ಬರುತ್ತಿರುವ ಲ್ಯಾಬ್ ಸಹಶಿಕ್ಷಕ ರುದ್ರಪ್ಪ ಅವರಿಗೆ ಸಂಬಳವನ್ನು ಕೊಡದೆ, ಇತ್ತ ಶಾಲಾ ಹಾಜರಾತಿಗೆ ಸಹಿ ಮಾಡಲು ಅವಕಾಶವನ್ನೂ ನೀಡದೆ ಸುಖಾಸುಮ್ಮನೆ ತೊಂದರೆ ನೀಡುತ್ತಿರುವ ಬಗ್ಗೆ ರುದ್ರಪ್ಪ ವಿಜಯವಾಣಿ ಜತೆ ಅಳಲು ತೋಡಿಕೊಂಡಿದ್ದಾರೆ.

60 ಕ್ಕೂ ಹೆಚ್ಚು ಮಕ್ಕಳಿರುವ ಈ ಶಾಲೆಯಲ್ಲಿ ಕೇವಲ ಇಬ್ಬರು ಮಾತ್ರ ಕಾಯಂ ಶಿಕ್ಷಕರಿದ್ದು, ಇವರ ಜತೆಗೆ ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಎಲ್ಲರಿಗೂ ಒಂದೇ ದಿನ ವೇತನ ಬರುತ್ತಿದೆ. ಆದರೆ ಇವರ ಪೈಕಿ ಇಬ್ಬರಿಗೆ ಎರಡು ತಿಂಗಳಿನಿಂದ ಸಂಬಳವನ್ನು ನೀಡದೆ ಸಬೂಬು ಹೇಳಿಕೊಂಡು ಬರುತ್ತಿದ್ದಾರೆ. ರುದ್ರಪ್ಪ ಅವರಿಗೆ ಮಾತ್ರ ಬೇಕಂತಲೇ ಹಾಜರಿ ಪುಸ್ತಕಕ್ಕೆ ಸಹಿ ಮಾಡಲು ಅವಕಾಶ ಕೊಡದೆ 5 ತಿಂಗಳಿಂದ ವೇತನ ನೀಡದೆ ದೌರ್ಜನ್ಯವೆಸಗುತ್ತಿದ್ದಾರೆ. ಹಾಜರಾತಿ ಪುಸ್ತಕವನ್ನು ಬೀರುವಿನಲ್ಲಿ ಬಚ್ಚಿಟ್ಟು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಅಲ್ಲದೇ ಆಡಳಿತ ಮಂಡಳಿಯವರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ರುದ್ರಪ್ಪ ಆರೋಪಿಸಿದ್ದಾರೆ.

ಸಂಬಳ ಕೊಡದೆ ತೊಂದರೆ ನೀಡುತ್ತಿರುವ ಬಗ್ಗೆ ರುದ್ರಪ್ಪ ಪತ್ನಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದರು ಸಹ ಮೇಲಧಿಕಾರಿಗಳಿಂದ ಇಲ್ಲಿಯವರೆಗೂ ಯಾವುದೇ ಕ್ರಮವಾಗಿಲ್ಲ ಎಂದು ದೂರಿದರು.

ಈ ಬಗ್ಗೆ ಅರಸೀಕೆರೆಯ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಪ್ರತಿಕ್ರಿಯಿಸಿದ್ದು, ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಶೀಘ್ರವೇ ಈ ವಿಚಾರವಾಗಿ ಆಡಳಿತ ಮಂಡಳಿ ಹಾಗೂ ಶಿಕ್ಷಕರಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.