ಬೆಂಗಳೂರು:
ರಾಜ್ಯದಲ್ಲಿ 50 ಸಾವಿರ ಶಿಕ್ಷಕರ ಕೊರತೆ ಇದ್ದು, ಸದ್ಯ 10 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಮೇಲ್ಮನೆಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಸದಸ್ಯ ತಳವಾರ ಸಾಬಣ್ಣ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಾಥಮಿಕ ಶಾಲೆಯ 7500 ಶಿಕ್ಷಕ ಹುದ್ದೆ, ಪ್ರೌಢಶಾಲೆಯಲ್ಲಿ 2500 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಉದ್ದೇಶಿಸಿ ಆರ್ಥಿಕ ಇಲಾಖೆಯ ಒಪ್ಪಿಗೆಗಾಗಿ ಪತ್ರ ಬರೆಯಲಾಗಿದೆ ಎಂದರು.
ಆರ್ಥಿಕ ಇಲಾಖೆ ಒಪ್ಪಿಗೆ ದೊರೆತ ಕೂಡಲೆ ನೇಮಕ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಅದರಲ್ಲಿ 6500 ಶಿಕ್ಷಕರನ್ನ ಕಲ್ಯಾಣ ಕರ್ನಾಟಕ ಭಾಗಕ್ಕೆ ಕೊಡಲಾಗುವುದು ಎಂದು ಹೆಳಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಲಿ ಇದ್ದ 15 ಸಾವಿರ ಶಿಕ್ಷಕ ಹುದ್ದೆಗಳಲ್ಲಿ 13,352 ಅಭ್ಯರ್ಥಿಗಳು ಅರ್ಹರಾಗಿದ್ದು, ಅವರಲ್ಲಿ 12,429 ಅಭ್ಯರ್ಥಿಗಳು ಕೌನ್ಸಿಲಿಂಗ್‌ಗೆ ಹಾಜರಾಗಿದ್ದರು. 11,494 ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಈ ತನಕ 12 ಸಾವಿರ ಶಿಕ್ಷಕರ ನೇಮಕಾತಿ ಆದ ಮೇಲೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಕೊಟ್ಟಿದ್ದೇವೆ. ಶೈಕ್ಷಣಿಕ ಹಿತ ದೃಷ್ಟಿಯಿಂದ ತಾತ್ಕಾಲಿಕವಾಗಿ 33,863 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದರು.
ಊಟ ಬಟ್ಟೆ ಕೊಟ್ಟರೂ ಮಕ್ಕಳು ಶಾಲೆಗೆ ಬರುತ್ತಿಲ್ಲ. ಆದರೂ ಹಾಜರಾತಿ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಲಾಗಿದೆ. ಶಾಲೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಅನುದಾನ ನೀಡಲಾಗುತ್ತಿದೆ ಎಂದರು.
41 ಸಾವಿರ ಪ್ರಾಥಮಿಕ ಶಾಲೆಗಳಲ್ಲಿ 21 ಸಾವಿರ ಶಾಲೆಗಳಿಗೆ ಆಟದ ಮೈದಾನವಿಲ್ಲ. 4500 ಪ್ರೌಢಶಾಲೆಯಲ್ಲಿ 550 ಶಾಲೆಗಳಿಗೆ ಮೈದಾನವಿಲ್ಲ ಎಂದು ಉತ್ತರಿಸಿದರು.
ಮಳೆಗಾಲ ಪ್ರಾರಂಭವಾಗಿರುವುದರಿಂದ ಶಾಲೆಗಳ ದುರಸ್ತಿಗೆ ಮತ್ತು ಶೌಚಾಲಯಗಳ ದುರಸ್ತಿಗೆ ಕ್ರಮ ವಹಿಸಲಾಗಿದೆ ಎಂದರು.
ಚರ್ಚೆಯಲ್ಲಿ ಸಚಿವ ಈಶ್ವರ ಖಂಡ್ರೆ ಮತ್ತಿತರರು ಭಾಗವಹಿಸಿದ್ದರು.