ನ್ಯೂಸ್

ಸತ್ತಂತೆ ನಟಿಸಿ, ಕೊಲೆಯಾಗುವುದರಿಂದ ಬಚಾವಾದ ಯೋಗ ಶಿಕ್ಷಕಿ, ಆರು ಮಂದಿ ಅರೆಸ್ಟ್

ಚಿಕ್ಕಬಳ್ಳಾಪುರ: ಯೋಗ ಶಿಕ್ಷಕಿಯನ್ನು ಅಪಹರಿಸಿ, ಅತ್ಯಾಚಾರ ಮತ್ತು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.
ಕಿಡಿಗೇಡಿಗಳ ದುಷ್ಕೃತ್ಯವು ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವರದಿಯಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಡಿಟೆಕ್ಟಿವ್ ಏಜೆನ್ಸಿ ಮಾಲೀಕ ಸತೀಶ್‌ರೆಡ್ಡಿ, ರಮಣ, ಸಲ್ಮಾನ್, ರವಿ, ಸುಫಾರಿ ಕೊಟ್ಟಿದ್ದ ಮಹಿಳೆ ಸುಲೋಚನಾ, ಸುಫಾರಿ ಪಡೆದುಕೊಂಡಿದ್ದ ಮಹಿಳೆ ಬಿಂದು ಎಂಬುವವರನ್ನು ಬಂಧಿಸಿದ್ದು ಎಲ್ಲರೂ ಬೆಂಗಳೂರು ಮೂಲದವರು.

*ಜೀವಂತವಾಗಿ ಹೂತು ಹಾಕಲು ಯತ್ನ*
ಯೋಗ ಶಿಕ್ಷಕಿಯನ್ನು  ಅರೆಬೆತ್ತಲೆಗೊಳಿಸಿ ಜೀವಂತ ಹೂತು ಹಾಕಲು ಆರೋಪಿಗಳು ಯತ್ನಿಸಿದ್ದಾರೆ. ಇದೇ ವೇಳೆ ಬುದ್ದಿವಂತಿಕೆ ಪ್ರದರ್ಶಿಸಿದ ಸಂತ್ರಸ್ತೆ ಪ್ರಜ್ಞೆ ತಪ್ಪಿದಂತೆ ನಾಟಕವಾಡಿದ್ದಾಳೆ. ಇದರ ಮೂಲಕ ದುರುಳರ ದಿಕ್ಕು ತಪ್ಪಿಸಿ, ಕೊನೆಗೆ ಅರಣ್ಯ ಪ್ರದೇಶದಿಂದ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾಳೆ.

*ಪ್ರಕರಣದ ಹಿನ್ನೆಲೆ*
ಅಪಹರಣಕ್ಕೊಳಗಾಗಿದ್ದ ಯೋಗ ಶಿಕ್ಷಕಿ ಮದುವೆಯಾಗಿ, ಬಳಿಕ ಪತಿಯಿಂದ ಪ್ರತ್ಯೇಕವಾಗಿ ವಾಸವಿದ್ದರು. ಇದರ ನಡುವೆ ಈಕೆ ವ್ಯಕ್ತಿಯೊಬ್ಬರೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು ಇದರ ಬಗ್ಗೆ ಮಾಹಿತಿ ಕಲೆ ಹಾಕಿದ ಸುಲೋಚನಾ, ತನ್ನ ಗಂಡನೊಂದಿಗೆ ಅಕ್ರಮ ವ್ಯವಹಾರ ಹೊಂದಿರುವ ಯೋಗ ಶಿಕ್ಷಕಿಯನ್ನು ಮುಗಿಸಲು ಬಿಂದುವಿಗೆ ಸುಫಾರಿ ಕೊಟ್ಟಿದ್ದಾಳೆ‌. ಇದಕ್ಕೆ ಒಪ್ಪಂದ ಮಾಡಿಕೊಂಡ ಸತೀಶ್ ರೆಡ್ಡಿ ಎಂಬಾತ ಯೋಗ ಕಲಿಯುವ ನೆಪದಲ್ಲಿ ಹೋಗಿ ಶಿಕ್ಷಕಿಯೊಂದಿಗೆ ಹೆಚ್ಚಿನ ಸಲುಗೆ ಬೆಳೆಸಿಕೊಂಡಿದ್ದು ಹಾಗೆಯೇ ಇದರಡಿ ತನ್ನ ಗ್ಯಾಂಗ್ ನ ಜತೆ ಸೇರಿಕೊಂಡು ಯೋಜನೆ ರೂಪಿಸಿದ್ದಾನೆ. ಅದರಂತೆ ಕೊಪ್ಪಳದಲ್ಲಿ ಕದ್ದ ಕಾರಿನಲ್ಲಿ ಯೋಗ ಶಿಕ್ಷಕಿಯನ್ನು ಅಪಹರಿಸಲಾಗಿದೆ. ದಿಬ್ಬೂರಹಳ್ಳಿ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಬಂದು ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಲಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ ಕೂಗಿಕೊಂಡಾಗ ಕತ್ತು ಹಿಸುಕಿ ಮಹಿಳೆಯನ್ನು ಕೊಲ್ಲಲು ಮುಂದಾಗಿದ್ದಾರೆ. ಇದೇ ವೇಳೆ ಆಕೆ ಸತ್ತಂತೆ ಕೆಳಗೆ ಬಿದ್ದಿದ್ದು ದುರುಳರು ಗುಂಡಿ ಅಗೆಯುವಾಗ ತಪ್ಪಿಸಿಕೊಂಡು ಯೋಗ ಶಿಕ್ಷಕಿ ಅಲ್ಲಿಂದ ಓಡಿ ಬಂದಿದ್ದಾಳೆ‌. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.

* ಯೋಗ ಶಿಕ್ಷಕಿಯನ್ನು ಅಪಹರಿಸಿ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕೊಲೆಗೆ ಯತ್ನಿಸಿದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಕುಶಾಲ್ ಚೌಕ್ಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಿಕ್ಕಬಳ್ಳಾಪುರ