ಕುಂದಾಪುರ: ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನಕ್ಕೆ ಪ್ರವಾಸಕ್ಕೆಂದು ಬಂದ ವಿದ್ಯಾರ್ಥಿಗಳಿಗೆ ಶಿಕ್ಷಕರೊಬ್ಬರು ಹೊಡೆಯುತ್ತಿದ್ದುದನ್ನು ಗಮನಿಸಿದ ಇತರ ಪ್ರವಾಸಿಗರು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ಭಾನುವಾರ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಶಾಲೆಯೊಂದರ ವಿದ್ಯಾರ್ಥಿಗಳು ಆನೆಗುಡ್ಡೆಗೆ ಪ್ರವಾಸ ಬಂದಿದ್ದರು. ಕ್ಷೇತ್ರ ದರ್ಶನ ಬಳಿಕ ಮರಳಿ ಬಸ್ ಹತ್ತಲು ವಿದ್ಯಾರ್ಥಿಗಳು ತಡಮಾಡಿದರೆಂಬ ಕಾರಣಕ್ಕೆ ಶಿಕ್ಷಕ ಈ ಮಕ್ಕಳಿಗೆ ಬೆತ್ತದಿಂದ ಹೊಡೆದಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಹಾಗೂ ಇತರ ಪ್ರವಾಸಿಗರು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಚಾರಿಸಲು ಬಂದ ಪ್ರವಾಸಿಗರಿಗೂ ಬೈದ ಶಿಕ್ಷಕನಿಗೆ ಸ್ಥಳೀಯರು ಛೀಮಾರಿ ಹಾಕಿದ್ದು, ಇಡೀ ದೃಶ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿರುವ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.